

ಬೆಂಗಳೂರು: ಡೀಪ್ ಟೆಕ್ ಸ್ಟಾರ್ಟ್‌ಅಪ್ ಉತ್ತೇಜಿಸಲು 1,200 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದ್ದಾರೆ.
ನಗರದ ಬಿಐಇಸಿಯಲ್ಲಿ ಗುರುವಾರ ಮುಕ್ತಾಯಗೊಂಡ 3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್'ನ ಸಮಾರೋಪದಲ್ಲಿ ಮಾತನಾಡಿದ ಅವರು, ಡೀಪ್ ಟೆಕ್ ಸ್ಟಾರ್ಟ್‌ಅಪ್ ಉತ್ತೇಜಿಸಲು ಒಟ್ಟು 1,200 ಕೋಟಿ ರೂ.ಗಳಿಗೂ ಹೆಚ್ಚು ನಿಧಿಯನ್ನು ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ವಿವಿಧ ಉದ್ಯಮಿಗಳು ಒಟ್ಟು 786.43 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ಉಳಿದ ಹಣವನ್ನು ಕರ್ನಾಟಕ ಸರ್ಕಾರ ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.
ಡೀಪ್ ಟೆಕ್ ಸ್ಟಾರ್ಟ್‌ಅಪ್'ಗಳಿಗೆ ಭಾರತದಲ್ಲಿ ಎಲ್ಲಿಯೂ ಸರ್ಕಾರ ಮತ್ತು ಖಾಸಗಿ ವಲಯ ಹೂಡಿಕೆಗೆ ಸಹಕರಿಸುವುದನ್ನು ನೀವು ನೋಡಿರುವುದಿಲ್ಲ. ದೇಶದ ಉಳಿದ ಭಾಗಗಳು ಕೂಡ ಈ ರೀತಿ ಮಾಡುವಂತೆ ನಾವು ಪ್ರೇರೇಪಿಸುತ್ತೇವೆ. ಜಗತ್ತಿನಲ್ಲಿ ಸಾಟಿಯಿಲ್ಲದ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತೇವೆ. ಈ ವೇದಿಕೆ ಸೃಷ್ಟಿಸಲು ದೇಣಿಗೆ ನೀಡಿದ ಉದ್ಯಮಿಗಳಿಗೆ ಧನ್ಯವಾದಗಳು. ಎಲಿವೇಟ್ ಕಾರ್ಯಕ್ರಮದಿಂದ 143 ಸ್ಟಾರ್ಟ್‌ಅಪ್‌ಗಳು ಪ್ರಯೋಜನ ಪಡೆದಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭರತೋನ್ ಸರ್ವೀಸಸ್ ಮತ್ತು ಅಂಗಸಂಸ್ಥೆಗಳು, ಇನ್ನೋವೇಶನ್ಸ್ ಮತ್ತು ಡಿಎಕ್ಸ್‌ಬಯೋಟಿಕ್ಸ್ ಎಲ್‌ಎಲ್‌ಪಿ ಸ್ಟಾರ್ಟ್‌ಅಪ್‌ಗಳ ಮಾಲೀಕರನ್ನು ವೇದಿಕೆಯ ಮೇಲೆ ಕರೆತಂದು ಸನ್ಮಾನಿಸಲಾಯಿತು.
Advertisement