ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದ ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣದ ಎಲ್ಲ ಪ್ರಮುಖ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಸಿಎಂಎಸ್ ಸಂಸ್ಥೆಯ ಎಟಿಎಂ ವ್ಯಾನ್ ಮೇಲೆ ದಾಳಿ ಮಾಡಿ ಆದರೊಳಗಿದ್ದ 7.11 ಕೋಟಿ ರೂ ದರೋಡೆ ಮಾಡಿದ್ದರು. ಬಳಿಕ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುವ ಗ್ಯಾಂಗ್ ಒಬ್ಬರ ಬಳಿಕ ಒಬ್ಬರಂತೆ ಪೊಲೀಸರ ಅತಿಥಿಗಳಾಗಿದ್ದಾರೆ.
ಈ ವೇಳೆ ದರೋಡೆಕೋರರಿಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದು ತನಿಖೆ ವೇಳೆ ದರೋಡೆಕೋರರ ಗ್ಯಾಂಗ್ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದೆ.
ದೋಚಿದ್ದ ಹಣದಲ್ಲಿ ಖರ್ಚಾಗಿದ್ದು ಎಷ್ಟು?
ಇನ್ನು ದರೋಡೆಕೋರರ ಗ್ಯಾಂಗ್ ದೋಚಿದ್ದ ಹಣದಲ್ಲಿ ಬಳಸಿದ್ದು ಕೇವಲ 1 ಲಕ್ಷ ರೂಗಳು ಎನ್ನುವುದು ನಗರ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಸಿಎಂಎಸ್ ಕಂಪನಿಯ ಎಟಿಎಂಗಳಿಗೆ ಹಣ ತುಂಬುವ ವಾಹನದಿಂದ ದೋಚಿದ್ದ 7.11 ಕೋಟಿ ಹಣದಲ್ಲಿ ಒಂದು ಲಕ್ಷ ರೂ ಹಣವನ್ನು ತಗೆದು ಇದರಲ್ಲಿ 2 ಮೊಬೈಲ್ ಖರೀದಿಸಿದ್ದಾರೆ. ಈ ಪೈಕಿ 40 ಸಾವಿರಕ್ಕೆ 1 ಒನ್ ಪ್ಲಸ್ ಮೊಬೈಲ್, 20 ಸಾವಿರ ರೂಗೆ ಮತ್ತೊಂದು ಮೊಬೈಲ್ ಖರೀದಿಸಿದ್ದಾರೆ.
ದರೋಡೆ ಮಾಡಿಕೊಂಡು ಹೋಗಲು ಹೋಗಿದ್ದ ಸಂಚು ಮಾಡಿದ್ದ ಕಡೆಗಳಲ್ಲೆಲ್ಲ ಸುತ್ತಾಡಲು ಪೆಟ್ರೋಲ್ ಹಾಗೂ ಎರಡು ದಿನ ಊಟಕ್ಕೆ ಹಾಗೂ ವಾಸ್ತವ್ಯ ಹೂಡಿದ್ದ ಲಾಡ್ಜ್ ಗಳಿಗೆ ಹಣ ಕೊಟ್ಟಿದ್ದಾರೆ. ಸಣ್ಣ ಪುಟ್ಟ ಸಹಾಯ ಮಾಡಿದ್ದವರಿಗೂ 5 ರಿಂದ 10 ಸಾವಿರದವರೆಗೆ ಹಣ ಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣ ಪತ್ತೆಗೆ ಬೃಹತ್ ಕಾರ್ಯಾಚರಣೆ, ಸೀರಿಯಲ್ ನಂಬರ್ ಪತ್ತೆ
ಅಂತೆಯೇ ದರೋಡೆ ಮಾಡಿದ್ದ ಹಣ ರಿಕವರಿ ಮಾಡಲು ಹೆಚ್‌ಡಿಎಫ್‌ಸಿ ಬ್ಯಾಂಕ್ ನಿಂದ ದರೋಡೆಯಾಗಿದ್ದ 7 ಕೋಟಿ 11 ಲಕ್ಷದ ಸೀರಿಯಲ್ ನಂಬರ್ ಗಳನ್ನು ಪತ್ರ ಬರೆದು ಬ್ಯಾಂಕ್ ನವರಿಂದ ಪಡೆದುಕೊಂಡಿದ್ದಾರೆ. ಅದರಲ್ಲಿ ಕಾಣೆಯಾಗಿರುವ ಸೀರಿಯಲ್ ನಂಬರ್‌ನ ನೋಟ್‌ಗಳನ್ನು ಮರಳಿ ರಿಕವರಿ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಸಿಎಂಎಸ್ ಸಂಸ್ಥೆಯಿಂದ ಹೆಚ್ಚುವರಿ ಭದ್ರತೆ, ಸಿಬ್ಬಂದಿಗಳ ಮೇಲೆ ಹದ್ದಿನಕಣ್ಣು
ದರೋಡೆ ಮಾಡಿದ ಬಳಿಕ, ಸಿಎಂಎಸ್ ಕಂಪನಿಯು ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜಾಜಿನಗರದ ಸಿಎಂಎಸ್ ಕಂಪನಿ ಬಳಿ ಹದ್ದಿನ ಕಣ್ಣಿಟ್ಟಿದೆ. ಎಟಿಎಂ ಘಟಕಗಳಿಗೆ ಹಣ ಸಾಗಿಸುವ ಕಂಪನಿಯ ವಾಹನಕ್ಕೆ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ.
ಸಂಸ್ಥೆಯಿಂದ ಲೋಡ್ ಮಾಡಿಕೊಂಡ ವಾಹನಕ್ಕೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಬ್ಬರು ಕಸ್ಟೋಡಿಯನ್, ಗನ್ ಮ್ಯಾನ್, ಚಾಲಕನೊಂದಿಗೆ ಭಾರಿ ಭದ್ರತೆಯೊಂದಿಗೆ ಹಣ ತುಂಬಿದ ವಾಹನ ಸಾಗುತ್ತಿದ್ದು, ಹಿಂದೆ-ಮುಂದೆ ಕ್ಯಾಮೆರಾ ತಪಾಸಣೆಯನ್ನೂ ಮಾಡಲಾಗುತ್ತಿದೆ.
ಸಿಎಂಎಸ್ ಕಂಪನಿಯು ನಗರದ ಮೂರು ಕಡೆಗಳಲ್ಲಿ ಸಬ್ ಬ್ರಯಾಂಚ್‌ಗಳನ್ನ ಹೊಂದಿದ್ದು ಎಲ್ಲೆಡೆಯೂ ಬಿಗಿ ಭದ್ರತೆಯನ್ನು ಕೈಗೊಂಡಿದೆ.ಆದರೂ ಕೆಲವು ಕಡೆಗಳಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಇದೆ. ಕೆಲವು ಕಡೆ ಗನ್ ಮ್ಯಾನ್ ಇರುವುದಿಲ್ಲ. ಇನ್ನೂ ಕೆಲವು ಕಡೆ ಕಸ್ಟೋಡಿಯನ್ ಇರದಿದ್ದರೆ ಹಣ ಸಾಗಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು,ದರೋಡೆ ಬಳಿಕ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Advertisement