
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೊಂದು ವಿಚಿತ್ರವಾದ ಪ್ರಕರಣ ದಾಖಲಾಗಿದ್ದು, ವಿವಾಹಿತರ ಅನೈತಿಕ ಸಂಬಂಧ ಮಹಿಳೆಯ ಅನುಮಾನಸ್ಪದ ಸಾವಿನಲ್ಲಿ ಅಂತ್ಯವಾಗಿದೆ.
ತನ್ನ ವಿವಾಹಿತ ಪ್ರಿಯಕರ, ತಾನೇ ಪರಿಚಯಿಸಿದ್ದ ಸ್ನೇಹಿತೆ ಜತೆ ಓಯೋ ರೂಂನಲ್ಲಿರುವದನ್ನು ಕಂಡು 38 ವರ್ಷದ ಯಶೋಧ ಎಂಬ ವಿವಾಹಿತ ಮಹಿಳೆ ಅದೇ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 2 ರಂದು ಬೆಂಗಳೂರಿನ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿರುವ ಓಯೋ ಚಾಂಪಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
ಯಶೋಧಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಆದರೆ ಯಶೋಧ ಅವರು, ಆಡಿಟರ್ ವಿಶ್ವನಾಥ್ ಎಂಬುವವರ ಜೊತೆಗೆ 8 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು. ಅಡಿಟರ್ ವಿಶ್ವನಾಥ್ ಗೂ ವಿವಾಹವಾಗಿದ್ದು ಹೆಂಡತಿ ಮಕ್ಕಳಿದ್ದಾರೆ.
ಯಶೋಧ ಅವರು ಇತ್ತೀಚಿಗೆ ತನ್ನ ಸ್ನೇಹಿತೆಯನ್ನು ವಿಶ್ವನಾಥ್ ಗೆ ಪರಿಚಯಿಸಿದ್ದಳು. ನಂತರ ವಿಶ್ವನಾಥ್ ಯಶೋಧ ಸ್ನೇಹಿತೆ ಜೊತೆಗೂ ಕದ್ದು ಮುಚ್ಚಿ ಚೆಲ್ಲಾಟ ಆಡುತ್ತಿದ್ದರು. ಯಶೋಧ ಸ್ನೇಹಿತೆ ಜೊತೆಗೆ ಓಯೋ ಚಾಂಪಿಯನ್ ಕಂಫರ್ಟ್ ಗೆ ವಿಶ್ವನಾಥ್ ಹೋಗಿದ್ದರು. ಈ ವಿಚಾರ ತಿಳಿದ ಯಶೋಧ ತಾನು ಕೂಡ ಅದೇ ಲಾಡ್ಜ್ ಗೆ ಹೋಗಿ ವಿಶ್ವನಾಥ್ ಹಾಗೂ ಆಕೆಯ ಸ್ನೇಹಿತೆ ಉಳಿದುಕೊಂಡಿದ್ದ ರೂಮ್ ಎದುರಿನ ರೂಮ್ ಅನ್ನೇ ಬಾಡಿಗೆ ಪಡೆದಿದ್ದಳು. ಲಾಡ್ಜ್ ನಲ್ಲಿ ಯಶೋಧ ಕೈಗೆ ಗೆಳೆಯ ಅಡಿಟರ್ ವಿಶ್ವನಾಥ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ವಿಶ್ವನಾಥ್ ಜೊತೆಗೆ ಯಶೋಧ ಲಾಡ್ಜ್ ನಲ್ಲಿಯೇ ಜಗಳವಾಡಿದ್ದು, ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಯಶೋಧ ಅವರ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಸಾವಿನ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement