
ಬೆಂಗಳೂರು: ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಯಾರು ಎಷ್ಟೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರೂ ಸಮೀಕ್ಷೆ ಮುಂದುವರಿಯುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರೇ ಏನೇ ಆಕ್ಷೇಪಣೆ ಮಾಡಿದರೂ ಸಮೀಕ್ಷೆ ನಡೆಯುತ್ತದೆ. ಇಷ್ಟವಿದ್ದ ಪ್ರಶ್ನೆಗೆ ಉತ್ತರಿಸಿ, ಇಲ್ಲದಿದ್ದರೆ ಬೇಡ ಎಂದು ನ್ಯಾಯಾಲಯವೇ ಹೇಳಿದೆ. ಸಮೀಕ್ಷೆಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈ ಹಿಂದಿನ ಗಣತಿ ಸರಿಯಿಲ್ಲ. ಅದಕ್ಕೆ ಹೊಸದಾಗಿ ಗಣತಿ ಮಾಡಲಾಗುತ್ತಿದೆ. ಸಾರ್ವಜನಿಕರು ಗಣತಿದಾರರ ಪ್ರಶ್ನೆಗಳಿಗೆ ತಾಳ್ಮೆಯಿಂದ ಮಾಹಿತಿ ಒದಗಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ನ್ಯಾಯ ಕೊಟ್ಟಂತೆ ಆಗುತ್ತದೆ. ಆನ್‌ಲೈನ್‌ನಲ್ಲಿಯೂ ಮಾಹಿತಿ ಕೊಡಲು ಅವಕಾಶವಿದೆ. ಸಮೀಕ್ಷೆಯಿಂದ ಎಲ್ಲ ಜಾತಿಯ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ಹೆಚ್ಚು ಪ್ರಶ್ನೆಗಳಿದ್ದು, ನಾನು ಈಗಷ್ಟೇ ಪ್ರಶ್ನಾವಳಿ ನೋಡಿದೆ. ಸರಳೀಕರಣ ಮಾಡಬೇಕಿತ್ತು. ಗ್ರಾಮೀಣ ಭಾಗದವರಾದರೆ ಪರವಾಗಿಲ್ಲ. ಬೆಂಗಳೂರಿನ ಜನರಿಗೆ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರಿಸಲು ತಾಳ್ಮೆ ಕಡಿಮೆ ಅನಿಸುತ್ತದೆ ಎಂದು ತಿಳಿಸಿದರು.
ಕೆಲವು ವೈಯಕ್ತಿಕ ಮಾಹಿತಿಯ ಪ್ರಶ್ನೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ. ಸಮೀಕ್ಷೆದಾರರು ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ ಎಂದರು.
ಅಕ್ಟೋಬರ್ 7 ರ ಗಡುವನ್ನು ವಿಸ್ತರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Advertisement