
ಬೆಂಗಳೂರು: ಸೋಮವಾರ ಮುಂಜಾನೆ ಸುರಿದ ಭಾರೀ ಮಳೆಯ ಪರಿಣಾಮ ಉಳ್ಳಾಲದಲ್ಲಿ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಬಿದ್ದಿದ್ದು, ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ತಡೆಗೋಡೆ ಕುಸಿದ ಪರಿಣಾಮ ಮಕ್ಕಳು ಆಟವಾಡುತ್ತಿದ್ದ ಪ್ರದೇಶದ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಘಟನೆ ಬಳಿಕ ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ನೀರು ನುಗ್ಗಿದ್ದು, ಕಾರೊಂದು ಹಾನಿಗೊಳಗಾಗಿದೆ.
ಭಾನುವಾರ ಬೆಳಿಗ್ಗೆ 8.30 ರಿಂದ ಸೋಮವಾರ ಬೆಳಿಗ್ಗೆ 8.30 ರವರೆಗೆ 24 ಗಂಟೆಗಳ ಕಾಲ 6.8 ಮಿಮೀ ಮಳೆಯಾಗಿದ್ದು, ಹೆಬ್ಬಾಳದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಳೆಯಿಂದಾಗಿ ನಾಗವಾರ ಜಂಕ್ಷನ್‌ನಲ್ಲಿಯೂ ಮರದ ಕೊಂಬೆ ರಸ್ತೆಗೆ ಬಿದ್ದಿದ್ದರಿಂದ ಸಂಚಾರ ಸ್ತಬ್ಧಗೊಂಡು, ವಾಹನ ಸವಾರರು ಪರದಾಡುವತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಸಂಚಾರ ಪೊಲೀಸರು ಬದಲಿ ಮಾರ್ಗಗಳ ಬಳಸುವಂತೆ ಮನವಿ ಮಾಡಿದರು.
ಪೀಣ್ಯದಲ್ಲಿ ಸುರಿದ ಮಳೆಗೆ ಮರವೊಂದು ಉರುಳಿ ಬಿದ್ದ ಕಾರಣ, ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಂಚಾರ ಪೊಲೀಸರು ವಾಹನ ಸವಾರರು ಎನ್‌ಟಿಟಿಎಫ್ ರಸ್ತೆಯನ್ನು ಬಳಸುವಂತೆ ಸಲಹೆ ನೀಡಿದರು.
ಈ ನಡುವೆ ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ ವಿಭಾಗಕ್ಕೆ ನಿರ್ದೇಶನ ನೀಡುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
Advertisement