
ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಜವಾಬ್ದಾರರಾಗಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಗುತ್ತಿಗೆದಾರರು ಮತ್ತು ಆಟೋ-ಟಿಪ್ಪರ್‌ಗಳು ಮನೆಗಳಿಂದ ನೇರವಾಗಿ ತ್ಯಾಜ್ಯವನ್ನು ಸಂಗ್ರಹಿಸಿ ಗೊತ್ತುಪಡಿಸಿದ ತ್ಯಾಜ್ಯ ವಿಲೇವಾರಿ ಕೇಂದ್ರಗಳಿಗೆ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಬೆಂಗಳೂರು ನಗರ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮಂಗಳವಾರ ಸೂಚನೆ ನೀಡಿದರು.
ಪುಲಕೇಶಿ ನಗರ ವಿಭಾಗದಲ್ಲಿ, ವಿಶೇಷವಾಗಿ ಕಾವೇರಿ ನಗರ, ಮುನಿಸ್ವಾಮಪ್ಪ ಕಾಲೋನಿ ಮತ್ತು ಆದರ್ಶ ನಗರ ಕಾಲೋನಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಪರಿಶೀಲನೆ ನಡೆಸಿದರು.
ತ್ಯಾಜ್ಯ ಸಂಗ್ರಹಣಾ ವಾಹನಗಳು ಮನೆ-ಮನೆಗಳಿಂದ ಕಸ ಸಂಗ್ರಹಿಸುತ್ತಿಲ್ಲ ಎಂಬ ಪುಲಕೇಶಿ ನಗರ ವಿಭಾಗದ ಕಲ್ಯಾಣ ಅಭಿವೃದ್ಧಿ ಸಂಘಗಳಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ತ್ಯಾಜ್ಯ ವಿಲೇವಾರಿಗೆ ಜವಾಬ್ದಾರರಾಗಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಗುತ್ತಿಗೆದಾರರು ಮತ್ತು ಆಟೋ-ಟಿಪ್ಪರ್‌ಗಳು ಮನೆಗಳಿಂದ ನೇರವಾಗಿ ತ್ಯಾಜ್ಯವನ್ನು ಸಂಗ್ರಹಿಸಿ ಗೊತ್ತುಪಡಿಸಿದ ತ್ಯಾಜ್ಯ ವಿಲೇವಾರಿ ಕೇಂದ್ರಗಳಿಗೆ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಖಾಲಿ ಜಾಗಗಳಲ್ಲಿ ತ್ಯಾಜ್ಯವನ್ನು ಸುರಿಯುವುದನ್ನು ತಡೆಯಲು ನಿವಾಸಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದರು.
ಎಲ್ಆರ್ ಬಂಡೆ ರಸ್ತೆಯಲ್ಲಿರುವ ಖಾಲಿ ಜಾಗವು ವಿವಾದಿತ ಪ್ರದೇಶವಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿದಿವೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಮತ್ತು ಕಂದಾಯ ಇಲಾಖೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೋಮಿನ್ ಮತ್ತು ಇತರ ಸಂಬಂಧಪಟ್ಟ ಎಂಜಿನಿಯರ್‌ಗಳು ಹಾಜರಿದ್ದರು.
Advertisement