
ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮತ್ತು ಜನತಾ ದಳ (ಜಾತ್ಯತೀತ) ಮುಖ್ಯಸ್ಥ ಹೆಚ್‌ಡಿ ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ತೀವ್ರ ಅಸ್ವಸ್ಥತೆಯಿಂದಾಗಿ ದೇವೇಗೌಡ ಅವರು ಸೋಮವಾರ ರಾತ್ರಿ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿದೆ, ಒಂದು ಅಥವಾ ಎರಡು ದಿನಗಳಲ್ಲಿ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಮಣಿಪಾಲ ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಆತಂಕಕ್ಕೆ ಯಾವುದೇ ಕಾರಣವಿಲ್ಲ. ದೇವೇಗೌಡ ಅವರ ಆರೋಗ್ಯವನ್ನು ತಜ್ಞರ ತಂಡ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಗೌಡರ ಕುಟುಂಬ ಸದಸ್ಯರು ಮತ್ತು ಹಿರಿಯ ಜೆಡಿಎಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.
ಇದೇ ವೇಳೆ ದೇವೇಗೌಡ ಅವರು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹಾರೈಸಿದ್ದಾರೆ.
ದೇವೇಗೌಡ ಅವರು ಚೇತರಿಸಿಕೊಂಡು, ಪೂರ್ಣ ಆರೋಗ್ಯವಂತರಾಗಿ ಹೊರಬರಲಿ ಎಂದು ಹಾರೈಸುವೆ. ಆರೋಗ್ಯ ವಯಸ್ಸು ಎರಡನ್ನೂ ಲೆಕ್ಕಿಸದೇ ಈ ಕ್ಷಣಕ್ಕೂ ಜನರ ದುಃಖ – ದುಮ್ಮಾನಗಳಿಗೆ ಪಡಿಮಿಡಿಯುವ ದೇವೇಗೌಡರ ರಾಜಕೀಯ ಕ್ರಿಯಾಶೀಲತೆ ಹಾಗೂ ಜನರ ಸಮಸ್ಯೆಗಳ ಪರವಾಗಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಸಲುವಾಗಿ ಸಕಾಲದಲ್ಲಿ ಜಾಗೃತ ದನಿಯೆತ್ತುವ ಅವರ ಹೋರಾಟದ ಗುಣ ನಮ್ಮಂತವರಿಗೆ ಪ್ರೇರಣಾ ಶಕ್ತಿಯಾಗಿದೆ. ದೇವೇಗೌಡರು ಶತಾಯುಷಿಯಾಗಿ ನಾಡಿಗೆ ಹಾಗೂ ದೇಶಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯಾಗಿ ನಿಲ್ಲಬೇಕೆನ್ನುವುದು ಕೋಟಿ, ಕೋಟಿ ಕನ್ನಡಿಗರ ಮಹದಾಸೆಯಾಗಿದೆ. ಅವರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುವೆ ಎಂದು ಹೇಳಿದ್ದಾರೆ.
Advertisement