
ಬೆಂಗಳೂರು: ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೇನಹಳ್ಳಿಯಲ್ಲಿ ನಡೆದಿದೆ.
ವೀರಣ್ಣಪಾಳ್ಯ ನಿವಾಸಿ ಶಶಿಕುಮಾರ್(20) ಮೃತ ವಿದ್ಯಾರ್ಥಿ. ಮಂಗಳವಾರ ಬೆಳಿಗ್ಗೆ 8ರ ಸುಮಾರಿಗೆ ನಾಗೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.
ವೀರಣ್ಣಪಾಳ್ಯದ ನಿವಾಸಿ ವಾಸುದೇವ್ ಅವರ ಪುತ್ರ ಶಶಿಕುಮಾರ್, ಯಲಹಂಕದಲ್ಲಿ ಇರುವ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ಬೆಳಿಗ್ಗೆ ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವಾಗ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ನಾಗೇನಹಳ್ಳಿ ರೈಲ್ವೆ ಹಳಿ ದಾಟುತ್ತಿದ್ದ.
ಆ ಸಮಯದಲ್ಲಿ ಎಲೆಕ್ಟ್ರಿಕ್ ಎಂಜಿನ್‌ನ ಗೂಡ್ಸ್ ರೈಲು ಬಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement