
ಬೆಂಗಳೂರು: ಯುವಕ ಮತ್ತು ಯುವತಿ ಸಜೀವ ದಹನವಾಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಲಾಡ್ಜ್ನಲ್ಲಿ ಗುರುವಾರ ನಡೆದಿದೆ.
ಮೃತರನ್ನು ಗದಗ ಮೂಲದ ಯುವಕ ರಮೇಶ್ ಮತ್ತು ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂದು ಗುರುತಿಸಲಾಗಿದ್ದು, ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.
ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇಂದು ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಲಾಡ್ಜ್ ನಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ ರಮೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದು, ಯುವತಿ ಕಾವೇರಿ ಉಸಿರುಗಟ್ಡಿ ಸಾವನ್ನಪ್ಪಿರೋದು ಗೊತ್ತಾಗಿದೆ.
ಲಾಡ್ಜ್ನ 3ನೇ ಮಹಡಿಯ ರೂಮ್ನಲ್ಲಿದ್ದ ರಮೇಶ್ ಮತ್ತು ಕಾವೇರಿ ಬಡಿಗೇರ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆನಾ ಅಥವಾ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತೇವೆ. ಈ ಇಬ್ಬರು ಕಳೆದ 1 ವಾರದಿಂದ ಲಾಡ್ಜ್ನಲ್ಲಿದ್ದರು ಎಂದು ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ರಮೇಶ್, ಕಾವೇರಿ ನಡುವೆ ಜಗಳವಾಗಿತ್ತು. ಮಧ್ಯಾಹ್ನ ಕಾವೇರಿ ರೂಮ್ನಲ್ಲಿದ್ದರೆ, ರಮೇಶ್ ಹೊರಹೋಗಿದ್ದ ಮತ್ತು ರೂಮ್ಗೆ ಹಿಂದಿರುಗುವಾಗ ಪೆಟ್ರೋಲ್ ತುಂಬಿದ್ದ ಬಾಟಲಿ ತಂದಿದ್ದ. ರೂಮ್ನಲ್ಲಿ ರಮೇಶ್, ಕಾವೇರಿ ನಡುವೆ ಮತ್ತೆ ಜಗಳವಾಗಿರುವ ಸಾಧ್ಯತೆ ಇದ್ದು, ಜಗಳ ವಿಕೋಪಕ್ಕೆ ಹೋಗಿ ರಮೇಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾವೇರಿ ಬಾತ್ರೂಮ್ಗೆ ಓಡಿದ್ದಾಳೆ ಎಂದರು.
ಬಾತ್ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದ ಕಾವೇರಿ, ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಅಷ್ಟೊತ್ತಿಗಾಗಲೇ ಬೆಂಕಿ ಕೆನ್ನಾಲಿಗೆ ಇಡೀ ರೂಮ್ಗೆ ವ್ಯಾಪಿಸಿತ್ತು. ಬೆಂಕಿ ಜ್ವಾಲೆಯಲ್ಲಿ ಸಿಲುಕಿ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಕೂಡ ಮೃತಪಟ್ಟಿದ್ದಾಳೆ. ಸದ್ಯ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಡಿಸಿಪಿ ವಿ.ಜೆ.ಸಜೀತ್ ಹೇಳಿದ್ದಾರೆ.
Advertisement