
ಮಂಗಳೂರು: ಮಂಗಳೂರಿನಲ್ಲಿ ಮುಸ್ಲಿಂ (Muslim) ಕ್ಯಾಬ್ ಚಾಲಕನನ್ನು ಭಯೋತ್ಪಾದಕ (Terrorist) ಎಂದು ಕರೆದ ಆರೋಪದ ಮೇಲೆ ಮಲಯಾಳಂ ನಟ ಜಯಕೃಷ್ಣನ್, ಸಂತೋಷ್ ಅಬ್ರಹಾಂ ಮತ್ತು ವಿಮಲ್ ಎಂಬ ಮೂವರು ಕೇರಳಿಗರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಉರ್ವಾ ಪೊಲೀಸರು ನಟ ಜಯಕೃಷ್ಣನ್ ಹಾಗೂ ಸಂತೋಷ್ ಅಬ್ರಹಾಂನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಕ್ಟೋಬರ್ 9ರ ರಾತ್ರಿ ನಟ ಜಯಕೃಷ್ಣನ್ ಉಬರ್ ಮತ್ತು ರಾಪಿಡೋ ಕ್ಯಾಪ್ಟನ್ ಅಪ್ಲಿಕೇಶನ್‌ಗಳ ಮೂಲಕ ಕ್ಯಾಬ್ ಬುಕ್ ಮಾಡಿದ್ದಾರೆ. ಪಿಕಪ್ ವಿಳಾಸವನ್ನು ಮಂಗಳೂರು ಬೆಜೈ ನ್ಯೂ ರೋಡ್ ಎಂದು ನೀಡಿದ್ದಾರೆ. ದೂರುದಾರ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಪಿಕಪ್ ಸ್ಥಳವನ್ನು ದೃಢೀಕರಿಸಲು ಅಪ್ಲಿಕೇಶನ್ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ.
ಸಂಭಾಷಣೆ ವೇಳೆ ಆರೋಪಿಯೂ ಹಿಂದಿಯಲ್ಲಿ ಮಾತನಾಡುತ್ತಾ ಅಹ್ಮದ್ ಗೆ ಅಪಹಾಸ್ಯ ಮಾಡಿ, ಅವನನ್ನು ಮುಸ್ಲಿಂ ಉಗ್ರಗಾಮಿ ಮತ್ತು ಭಯೋತ್ಪಾದಕ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ನನಗೆ ಹಿಂದಿಯಲ್ಲಿ 'ಮುಸ್ಲಿಂ ಭಯೋತ್ಪಾದಕ' ಎಂದು ಹೇಳಿದ್ದು ಅಲ್ಲದೆ ನನ್ನ ತಾಯಿಯನ್ನು ಗುರಿಯಾಗಿಸಿಕೊಂಡು ಮಲಯಾಳಂನಲ್ಲಿ ಅವಾಚ್ಯ ಭಾಷೆಯನ್ನು ಬಳಸಿದ್ದಾರೆ ಎಂದು ದೂರು ನೀಡಿದ್ದಾನೆ.
ಅಹ್ಮದ್ ಶಫೀಕ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 352 ಮತ್ತು 353(2) ರ ಅಡಿಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲಯಾಳಂ ನಟ ಜಯಕೃಷ್ಣನ್ ಮತ್ತು ಅವರ ಸಹಚರರಾದ ವಿಮಲ್ ಮತ್ತು ಸಂತೋಷ್ ಅವರು ಕ್ಯಾಬ್ ಚಾಲಕನ ವಿರುದ್ಧ ಕೋಮು ನಿಂದನೆ ಮಾಡಿದ್ದಾರೆ ಎನ್ನಲಾದ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
Advertisement