
ಬೆಂಗಳೂರು: ಪರೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು, ಉಪನ್ಯಾಸಕರು ಸಮೀಕ್ಷೆ ಕಾರ್ಯದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಬಳಿಕವೂ 70 ಉಪನ್ಯಾಸಕರನ್ನು ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಳಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಕರ್ನಾಟಕದ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ಬೆಂಗಳೂರಿನಲ್ಲಿ 700 ಕ್ಕೂ ಹೆಚ್ಚು ಉಪನ್ಯಾಸಕರನ್ನು ಸಮೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಿ, ಪಿಯು ಉಪನ್ಯಾಸಕರನ್ನು ಸಮೀಕ್ಷೆಯಿಂದ ಕೈ ಬಿಡುವಂತೆ ಒತ್ತಾಯಿಸಿದ್ದೇವೆ. ಅಕ್ಟೋಬರ್ 10 ರಿಂದ 18 ರವರೆಗೆ ಪಿಯು ವಿದ್ಯಾರ್ಥಿಗಳಿಗೆ ಮಧ್ಯಂತರ ಪರೀಕ್ಷೆಗಳು ಪ್ರಾರಂಭವಾಗಿವೆ. ಸಮೀಕ್ಷೆಯ ಹೊರತಾಗಿ, ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಬೇಕಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಈ ನಡೆ ಕಾಲೇಜು ಹಾಗೂ ಉಪನ್ಯಾಸಕರಿಗೆ ಸಂಕಷ್ಟ ತಂದೊಡ್ಡಿದೆ. ಬೆಳಿಗ್ಗೆ ಪರೀಕ್ಷಾ ಕರ್ತವ್ಯಕ್ಕೆ, ಮಧ್ಯಾಹ್ನ ಸಮೀಕ್ಷಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ. ಇದು ಉಪನ್ಯಾಸಕರ ಹೊರೆ ಹೆಚ್ಚಿಸುತ್ತದೆ. ಹೀಗಾಗಿ ಕಾಲೇಜು ಪ್ರಾಂಶುಪಾಲಕರು ಪರೀಕ್ಷಾ ಕರ್ತವ್ಯಕ್ಕೆ ಇತರರನ್ನು ನಿಯೋಜಿಸುವ ಪರಿಸ್ಥಿತಿ ಎದುರಾಗಲಿದೆ. ಪರಿಸ್ಥಿತಿ ಅರ್ಥೈಸಿ ಸರ್ಕಾರ ಈ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ನಿರ್ದೇಶಕ ಭರತ್ ಎಸ್ ಅವರು ಮಾತನಾಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಪತ್ರ ಬರೆದು ಉಪನ್ಯಾಸಕರನ್ನು ಸಮೀಕ್ಷಾ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನವರನ್ನು ಕರ್ತವ್ಯದಿಂದ ಕೈಬಿಡಲಾಗಿದೆ. ಆದರೆ ಬೆಂಗಳೂರು ಉತ್ತರದಲ್ಲಿ 55 ಮತ್ತು ದಕ್ಷಿಣದಲ್ಲಿ 15 ಮಂದಿ ಸೇರಿದಂತೆ ಸುಮಾರು 70 ಜನರನ್ನು ಇನ್ನೂ ಸಮೀಕ್ಷೆಯಿಂದ ಕೈಬಿಟ್ಟಿಲ್ಲ. ಅವರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ನಿರ್ದೇಶಕರು ಪ್ರತಿಕ್ರಿಯಿಸಿ, ಇದು ನನ್ನ ಗಮನಕ್ಕೆ ಬಂದಿದೆ. ಕಳೆದ ವಾರ GBA ಗೆ ಸಲ್ಲಿಸಿದ್ದ ಉಪನ್ಯಾಸಕರ ಪಟ್ಟಿಯಲ್ಲಿ ಈ ಉಪನ್ಯಾಸಕರ ಕುರಿತು ಮಾಹಿತಿ ಇರಲಿಲ್ಲ. ಹೀಗಾಗಿಯೇ ಇವರನ್ನು ಕರ್ತವ್ಯದಿಂದ ಕೈಬಿಟ್ಟಿಲ್ಲ. ಇದೀಗ ಮತ್ತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಉಪನ್ಯಾಸಕರನ್ನು ಶೀಘ್ರದಲ್ಲೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
Advertisement