
ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ನಿಂದನೀಯ, ಬೆದರಿಕೆ ಕಾಮೆಂಟ್, ಪೋಸ್ಟ್ ಹಾಕಿದ್ದ ಐವರ ವಿರುದ್ಧ ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಎಂ.ಸಿ. ಮಂಜು ಹೆಸರಿನ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳಾದ 67, 66 ಹಾಗೂ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶೂ ಎಸೆತದ ಪ್ರಕರಣದ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಕೆಟ್ಟದಾಗಿ ಹಾಗೂ ಬೆದರಿಕೆಯೊಡ್ಡುವಂಥ ಕಾಮೆಂಟ್ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಸೈಬರ್ ಕ್ರೈಮ್‌ನ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ 06 ರಂದು ಈ ಘಟನೆ ನಡೆದಿದ್ದು, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿರ್.ಆರ್ ಗವಾಯಿ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಸುವ ವೇಳೆ ವಕೀಲ ರಾಕೇಶ್ ಕಿಶೋರ್ (Rakesh Kishore) ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾನೆ. ಘಟನೆೆ ಬಗ್ಗೆ ಬಹಳ ತಾಳ್ಮೆಯಿಂದ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ, ʼಘಟನೆಯಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಕೋರ್ಟ್‌ನಲ್ಲಿದ್ದ ವಕೀಲರಿಗೆ ವಾದ ಮುಂದುವರಿಸಲು ಸೂಚಿಸಿದ್ದರು.
ಸಿಜೆಐ ಮೇಲೆಯೇ ಶೂ ಎಸೆತ ಪ್ರಯತ್ನ ಮಾಡಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಕೀಲ ರಾಕೇಶ್ ಕಿಶೋರ್ ಹೇಳಿದ್ದು, ನಾನು ಮಾಡಿದ್ದು ಸರಿಯಿದೆ ಎಂದು ವಿತಂಡ ವಾದ ಮಾಡಿದ್ದಾನೆ. ಪ್ರಕರಣದ ಸಲುವಾಗಿ ನಾನು ಯಾವುದೇ ಪರಿಣಾಮ ಎದುರಿಸಲು ಸಿದ್ಧನಿದ್ದೇನೆ. ನಾನು ಜೈಲಿಗೆ ಹೋಗುತ್ತೇನೆ. ಅಲ್ಲಿನ ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆಂದು ಹೇಳಿದ್ದಾನೆ.
Advertisement