
ಬೆಂಗಳೂರು: ಭಿಕ್ಷಾಟನೆಗೆ ಅವಕಾಶವಿಲ್ಲವಾದರೂ ಇಂದಿಗೂ ಹಲವಾರು ಮಂದಿ ಅದರಲ್ಲೇ ನಿರತರಾಗಿದ್ದಾರೆ. ಮೆಟ್ರೋ ನಿಲ್ದಾಣಗಳ ಹೊರಗೆ ಕುಳಿತು ಭಿಕ್ಷೆ ಬೇಡುತ್ತಿದ್ದವರನ್ನು ನಾವು ನೋಡಿದ್ದೇವೆ. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರು ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ವಿಡಿಯೋ ವೈರಲ್ ಆಗಿದೆ.
34 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ, ಕಪ್ಪು ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ವ್ಯಕ್ತಿಯೊಬ್ಬ ಚಲಿಸುತ್ತಿರುವ ನಮ್ಮ ಮೆಟ್ರೋ ರೈಲಿನ ಕೊನೆಯ ಕೋಚ್‌ನಲ್ಲಿ ಕುಳಿತಿದ್ದ ಪ್ರಯಾಣಿಕರಿಂದ ಹಣ ಕೇಳುತ್ತಿರುವುದನ್ನು ಕಾಣಬಹುದು.
ಮೂಲಗಳ ಪ್ರಕಾರ, ಸೋಮವಾರ ರೈಲು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ಮತ್ತು ಶ್ರೀರಾಂಪುರ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.
ವ್ಯಕ್ತಿ ಬೆಳಗ್ಗೆ 11.04ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಸಿರು ಮಾರ್ಗದ ಮಾದಾವರ ಕಡೆಗೆ ತೆರಳುತ್ತಿದ್ದ ರೈಲು ಹತ್ತಿದ್ದಾನೆ. ಪ್ರಯಾಣಿಕರಿಂದ ಭಿಕ್ಷೆ ಕೇಳಲು ಮುಂದಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಬರುವವರೆಗೂ ಆತ ಹಣ ಕೇಳುವುದನ್ನು ಮುಂದುವರಿಸಿದ್ದು, ಕೊನೆಗೆ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆತನನ್ನು ಇಳಿಸಲಾಗಿದೆ.
ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 59ರ ಅಡಿಯಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಭಿಕ್ಷಾಟನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ಹಿಂದೆಯೂ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ್ದಕ್ಕಾಗಿ ದಂಡ ವಿಧಿಸಿದ ಹಲವು ನಿದರ್ಶನಗಳಿವೆ.
Advertisement