
ಬೆಂಗಳೂರು: ಯಾವುದೇ ಕಾರಣಗಳ ನೀಡದೆ ಸಾಮಾಜಿಕ-ಆರ್ಥಿಕ ಸಮೀಕ್ಷೆಯಿಂದ ದೂರ ಉಳಿದ 2,300 ಸಿಬ್ಬಂದಿ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ‘ನೋ ವರ್ಕ್ ನೋ ಪೇ’ ಆದೇಶ ಹೊರಡಿಸಿದ್ದಾರೆ.
ಪದೇ ಪದೇ ನೋಟಿಸ್ ಮತ್ತು ಎಸ್‌ಎಂಎಸ್ ಕಳುಹಿಸಿದರೂ ಈ ಗಣತಿದಾರರು ಕೆರ್ತವ್ಯಕ್ಕೆ ಹಾಜರಾಗಿಲ್ಲ. ಯಾವುದೇ ಕಾರಣ ನೀಡದೆ, ಅನಧಿಕೃತವಾಗಿ ಗೈರುಹಾಜರಿದ್ದಾರೆ. ಇದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಅನಧಿಕೃತ ಗೈರುಹಾಜರಿ ಅವಧಿಯ ವೇತನ ನೀಡದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಗೈರಾಗಿರುವವರು ಸಮೀಕ್ಷೆ ಕಾರ್ಯಕ್ಕೆ ತಕ್ಷಣ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಪ್ರತಿದಿನ ಕ್ರಮ ಕೈಗೊಳ್ಳಲಾಗುತ್ತದೆ. ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಅವರೇ ಹೊಣೆಗಾರರಾಗಿರುತ್ತಾರೆಂದು ತಿಳಿಸಿದ್ದಾರೆ.
21,000 ಗಣತಿದಾರರಲ್ಲಿ 18,000 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು, ಒಂದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿರುವವರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ‘ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಕಾರ್ಯ ನಿರೀಕ್ಷಿತ ರೀತಿಯಲ್ಲಿ ಆಗುತ್ತಿಲ್ಲ. ಜಿಬಿಎ ಮುಖ್ಯ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರು ಸಮೀಕ್ಷೆಯ ಪ್ರಗತಿ ಬಗ್ಗೆ ಗಮನ ಹರಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.
ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಮೀಕ್ಷಕರೊಬ್ಬರು ಪ್ರತಿ ದಿನ 16 ಮನೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ತಿಳಿಸಲಾಗಿತ್ತು. ಅದರಂತೆ ನಡೆದರೆ, ಅಕ್ಟೋಬರ್ 18 ಅಥವಾ 19ರೊಳಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಅ.13ರ ವೇಳೆಗೆ ಶೇ 30ರಷ್ಟು ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.
ಸಮೀಕ್ಷಕರೊಬ್ಬರು ದಿನಕ್ಕೆ 7ರಿಂದ 8 ಮನೆಗಳಷ್ಟೇ ಸಮೀಕ್ಷೆ ನಡೆಸುತ್ತಿದ್ದಾರೆ. ಅವರ ಮೇಲ್ವಿಚಾರಕರ ಕಾರ್ಯ ದಕ್ಷತೆಯಲ್ಲಿ ಕೊರತೆಯಾಗಿರುವುದು ಗೋಚರಿಸುತ್ತಿದೆ ಎಂದು ಹೇಳಿದ್ದಾರೆ.
ಸಮೀಕ್ಷೆ ಅವಧಿಯನ್ನು ವಿಸ್ತರಿಸುವುದು ತುಂಬಾ ಕಷ್ಟಕರವಾಗಿದ್ದು, ಸಮೀಕ್ಷಕರಿಗೆ ನೀಡಿರುವ ಇಲಾಖೆಗಳ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದ್ದಾರೆ.
Advertisement