
ಬೆಂಗಳೂರು: ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್‌ನ ಲಕ್ಷ ಕೋಟಿ ಹೂಡಿಕೆಯ ಎಐ ಹಬ್ ಆಂಧ್ರಪ್ರದೇಶಕ್ಕೆ ಹೋಗಿದ್ದರ ಕುರಿತು ಹಿರಿಯ ಉದ್ಯಮಿ ಮೋಹನದಾಸ್ ಪೈ ಅವರು, ರಾಜ್ಯದ ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆರನ್ನು ಗುರಿಯಾಗಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಉದ್ಯಮಿಗಳು ರಾಜ್ಯವನ್ನು ಬಿಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಮೋಹನ್ ದಾಸ್ ಪೈ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಉದ್ಯಮಿಗಳು ಕೇಳಿದ್ದೆಲ್ಲವನ್ನೂ ಕೊಡಲು ಆಗುವುದಿಲ್ಲ ಎಂಬ ಅರ್ಥದಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡಿರುವ ವಿಡಿಯೊ ತುಣಕು ಅದಾಗಿದೆ. ಗೂಗಲ್ ಅಂತಹ ದೊಡ್ಡ ಕಂಪನಿ ಸೃಷ್ಟಿಸುವ ಹೆಚ್ಚಿನ ಪಾವತಿಯ ಉದ್ಯೋಗಗಳಿಗೆ ಸ್ಥಳೀಯ ಸರ್ಕಾರಗಳು ನೀಡುವ ಸವಲತ್ತುಗಳು ಏನೂ ಅಲ್ಲ ಎಂದಿದ್ದಾರೆ.
ಕರ್ನಾಟಕದ ಸಚಿವರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಜಾತಿ, ಜಾತಿ ಗಣತಿ, ತುಷ್ಟೀಕರಣದ ಹಿಂದೆ ಬಿದ್ದಿದ್ದಾರೆ. ನಮ್ಮ ಸಚಿವರು ಅಭಿವೃದ್ಧಿ, ಉದ್ಯೋಗ ಸೃಷ್ಟಿ ತಂತ್ರಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಚಿತ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಸಾಲ ಮಾಡುತ್ತಿದ್ದಾರೆ. ಈ ಮೂಲಕ ಅವರು ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement