
ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಶ್ರೀರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ಎಸಗಿದ್ದ ವಿಘ್ನೇಶ್ (28) ಹಾಗೂ ಆತನಿಗೆ ನೆರವಾಗಿದ್ದ ಹರೀಶ್ (36) ಬಂಧಿತರು. ಕೃತ್ಯದ ಬಳಿಕ ಆರೋಪಿ ತಪ್ಪಿಸಿಕೊಳ್ಳಲು ಹರೀಶ್ ನೆರವಾಗಿದ್ದ ಎಂದು ಪೊಲೀಸರು ಹೇಳಿದರು. ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ ಅವರನ್ನು ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು.
ಆರೋಪಿಗಳ ಬಂಧನಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ, ಪೊಲೀಸರು ವಿಘ್ನೇಶ್ ಮತ್ತು ಕೊಲೆಗೆ ಸಹಕಾರ ನೀಡಿದ ಆತನ ಸ್ನೇಹಿತ ಹರೀಶ್ ಎಂಬಾತನನ್ನು ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೊಲೆಯ ಕೃತ್ಯವನ್ನು ವಿಘ್ನೇಶ್ ಮಾತ್ರ ಮಾಡಿದ್ದಾನೆ. ಆದರೆ, ಹರೀಶ್ ಈತನಿಗೆ ಸ್ಥಳಕ್ಕೆ ಡ್ರಾಪ್ ಮಾಡುವುದು ಮತ್ತು ಕೃತ್ಯದ ನಂತರ ಪಿಕ್ ಮಾಡುವುದಕ್ಕೆ ಸಹಾಯ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಆಕೆಯನ್ನು ಕೊಲೆ ಮಾಡಲು ವಿಘ್ನೇಶ್ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಕೃತ್ಯಕ್ಕೆ ಬೇಕಾದ ಚಾಕು ಖಾರದ ಪುಡಿಯನ್ನು ಜತೆಯಲ್ಲೇ ತಂದಿದ್ದ. ಕೊಲೆಗೂ ಮುನ್ನವೇ ದ್ವಿಚಕ್ರ ವಾಹನದಲ್ಲಿ ಮಲ್ಲೇಶ್ವರದ ಮಂತ್ರಿ ಮಾಲ್ ಬಸ್ ನಿಲ್ದಾಣದ ಬಳಿ ಬಂದಿದ್ದ ವಿಘ್ನೇಶ್ ಮತ್ತು ಹರೀಶ್ ಯಾಮಿನಿಯ ಬರುವಿಕೆಗಾಗಿ ಕಾದಿದ್ದರು.
ಬಿ.ಫಾರ್ಮಾ ಓದುತ್ತಿದ್ದ ಯಾಮಿನಿ ಕಾಲೇಜು ಮುಗಿಸಿಕೊಂಡು ಬನಶಂಕರಿ ಮೂರನೇ ಹಂತದಿಂದ ಬಿಎಂಟಿಸಿ ಬಸ್‍ನಲ್ಲಿ ಮಂತ್ರಿ ಮಾಲ್‍ನ ಬಳಿ ಬಂದು ರೈಲ್ವೆ ಹಳಿಯ ಪಕ್ಕದ ಕಾಲು ದಾರಿಯಲ್ಲಿ ಮನೆಯತ್ತ ನಡೆದು ಹೊರಟಿದ್ದರು. ಆಗ ಹಿಂಬಾಲಿಸಿಕೊಂಡು ಹೋಗಿ ಕೃತ್ಯ ಎಸಗಿದ್ದರು.
ವಾಟ್ಸ್‌ಆ್ಯಪ್ ಗ್ರೂಪ್ ಯಾಮಿನಿ ಅವರನ್ನು ಕೊಲೆ ಮಾಡಲು ವಿಘ್ನೇಶ್ ಪೂರ್ವಯೋಜಿತ ಸಂಚು ರೂಪಿಸಿದ್ದ. ಹಲವು ತಿಂಗಳುಗಳಿಂದ ಚಲನವಲನದ ಮೇಲೆ ಕಣ್ಣಿಟ್ಟಿದ್ದ ವಿಘ್ನೇಶ್ ಕೊಲೆ ಉದ್ದೇಶಕ್ಕಾಗಿಯೇ ‘ಮಿಷನ್ ಯಾಮಿನಿ ಪ್ರಿಯಾ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement