
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಬಾಕಿ ಇರುವ ಕಾಮಗಾರಿ, ಯೋಜನೆಗಳನ್ನು ಪೂರ್ಣಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಶುಕ್ರವಾರ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ಕಚೇರಿಯಲ್ಲಿ ಶುಕ್ರವಾರ ವಿವಿಧ ನಾಗರಿಕ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹೇಶ್ವರ್ ರಾವ್ ಅವರು ಮಾತನಾಡಿದರು.
ಯಾವುದಾದರು ಅಭಿವೃದ್ಧಿ ಕಾಮಗಾರಿಗಳು ಎರಡು ಅಥವಾ ಹೆಚ್ಚು ನಗರ ಪಾಲಿಕೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದರೆ, ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಪಾಲಿಕೆ ಮಟ್ಟದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮರ್ಪಕ ಕಾರ್ಯವನ್ನು ಹಂಚಿಕೆ ಮಾಡಬೇಕು. ಪ್ರತಿ ಅಧಿಕಾರಿಗೆ ಜವಾಬ್ದಾರಿಯನ್ನು ನಿಗದಿಪಡಿಸಿ, ಪ್ರಗತಿ ವರದಿ ಹಾಗೂ ಕಾರ್ಯನಿರ್ವಹಣಾ ಮಾಹಿತಿಯನ್ನು ನಿಯಮಿತವಾಗಿ ಸಲ್ಲಿಸುವ ವ್ಯವಸ್ಥೆ ರೂಪಿಸಬೇಕೆಂದು ಸೂಚಿಸಿದರು.
ನಗರ ಪಾಲಿಕೆ ಕಚೇರಿಗಳು ಹಾಗೂ ಉಪವಿಭಾಗಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇರುವ ಸ್ಥಳಗಳನ್ನು ಗುರುತಿಸಿ, ಸಂಬಂಧಿತ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ.
ಇನ್ನು ನಗರ ಪಾಲಿಕೆ ಮಟ್ಟದಲ್ಲಿ ಇ-ಆಫೀಸ್ ನಲ್ಲಿಯೇ ಕಡತ ವಿಲೇವಾರಿಗೆ ಕ್ರಮವಹಿಸಬೇಕು. ಕಾಗದ ಸ್ವರೂಪದ ದಾಖಲೆಗಳನ್ನು ಕ್ರಮೇಣ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಿ, ಎಲ್ಲಾ ಪ್ರಸ್ತಾವನೆಗಳು, ಅನುಮೋದನೆಗಳು ಮತ್ತು ಫೈಲ್ ಚಲಾವಣೆಗಳನ್ನು ಇ-ಆಫೀಸ್ ಮೂಲಕವೇ ನಡೆಸುವಂತೆ ಸೂಚಿಸಿದರು.
ಆಯಾ ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪ್ರಗತಿ ಮಾಹಿತಿ ಪಡೆಯುವ ಸಲುವಾಗಿ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಆ ನೋಡಲ್ ಅಧಿಕಾರಿ ಜಿಬಿಎ ಸಮನ್ವಯ ವಿಭಾಗದ ಜೊತೆ ಕಾಮಗಾರಿಗಳ ಕುರಿತು ಕಾಲ-ಕಾಲಕ್ಕೆ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ದಕ್ಷಿಣ ನಗರ ನಿಗಮ ಆಯುಕ್ತ ಕೆ.ಎನ್. ರಮೇಶ್, ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Advertisement