

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಟೋಲ್ ಮಾರ್ಗವನ್ನು ತಪ್ಪಿಸಿದ್ದಕ್ಕೆ ಮಾತಿನ ಚಕಮಕಿಕ ನಡೆಸಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಅಕ್ಟೋಬರ್ 20ರಂದು ಘಟನೆ ನಡೆದಿದ್ದು, ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಕ್ಯಾಬ್ ಚಾಲಕನನ್ನು ಕೇರಳದ ತ್ರಿಶೂರ್ ಮೂಲದ ಅಜಾಸ್ ಪಿ ಎಸ್ (31) ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಅಜಾಸ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಯುವತಿ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ಯುವತಿ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಳು. ಪ್ರಯಾಣದ ಸಮಯದಲ್ಲಿ ಟೋಲ್ ಶುಲ್ಕ ಪಾವತಿಸಿದ್ದರು, ಚಾಲಕ ಟೋಲ್ ರಸ್ತೆಯನ್ನು ತಪ್ಪಿಸಿದ್ದಾನೆ.
ಹೀಗಾಗಿ ಯುವತಿ ಪ್ರಶ್ನಿಸಿದ್ದು, ಇದಕ್ಕೆ ಸರಿಯಾದ ವಿವರಣೆ ನೀಡಿಲ್ಲ. ಹೀಗಾಗಿ ವಾಹನ ನಿಲ್ಲಿಸುವಂತೆ ಹೇಳಿದ್ದಾಳೆ. ಈ ವೇಳೆ ಚಾಲಕ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ಕ್ಯಾಬ್ ನಿಂದ ಕೆಳಗಿಳಿದ ವಿದ್ಯಾರ್ಥಿನಿ ಮತ್ತೊಂದು ಕ್ಯಾಬ್ ಬುಕ್ ಮಾಡಿದ್ದು, ಹತ್ತಲು ಮುಂದಾದಾಗ ಹಲ್ಲೆ ನಡೆಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ವಿದ್ಯಾರ್ಥಿನಿ ತನ್ನ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು, ಹೊರಟುಹೋಗಿದ್ದಾಳೆ. ಚಾಲಕ ಕೂಡ ಸ್ಥಳದಿಂದ ಪರಾಗಿಯಾಗಿದ್ದಾನೆಂದು ಹೇಳಿದ್ದಾರೆ.
ದೂರು ಹಿನ್ನೆಲೆ ಪೊಲೀಸರು, ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್'ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ 2 ದಿನಗಳ ಹಿಂದಷ್ಟೇ ಕೇರಳದಿಂದ ಬೆಂಗಳೂರಿಗೆ ಬಂದಿದ್ದು, ಬುಕಿಂಗ್ ಸ್ವೀಕರಿಸಿದಾಗ ಆತ ಮದ್ಯದ ಪ್ರಭಾವದಲ್ಲಿದ್ದ ಎಂದು ತಿಳಿಸಿದ್ದಾರೆ.
Advertisement