

ಮಂಗಳೂರು: ಸ್ಟೀರಿಂಗ್ ಗೇರ್ ವೈಫಲ್ಯದಿಂದಾಗಿ 11 ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಮೀನುಗಾರಿಕಾ ದೋಣಿ ಐಎಫ್‌ಬಿ ಸ್ಯಾಂಟ್ ಆಂಟನ್-I ನಲ್ಲಿನ 31 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ತಿಳಿಸಿದೆ.
ಗೋವಾ ಮೂಲದ ಹಡಗು ನವ ಮಂಗಳೂರಿನಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಂಪರ್ಕ ಕಳೆದುಕೊಂಡಿರುವುದು ತಿಳಿದುಬಂದಿತ್ತು. ಈ ಬಗ್ಗೆ ತಿಳಿದ ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಪ್ರಧಾನ ಕಚೇರಿ ತ್ವರಿತ ಕ್ರಮ ಕೈಗೊಂಡಿತು.
ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ದೋಣಿಯು ಕೊನೆಯದಾಗಿ ಸಂಪರ್ಕ ಕಳೆದುಕೊಂಡಿದ್ದ ಜಾಗಕ್ಕೆ ಐಸಿಜಿಯ ಕಸ್ತೂರಬಾ ಗಾಂಧಿ ಎಂಬ ಗಸ್ತು ಹಡಗನ್ನು ಕಳುಹಿಸಿಕೊಡಲಾಗಿತ್ತು ಮತ್ತು ಕೊಚ್ಚಿ ಕರಾವಳಿ ಪಡೆಯ ಡಾರ್ನಿಯರ್ ವಿಮಾನವನ್ನು ವೈಮಾನಿಕ ಶೋಧಕ್ಕಾಗಿ ನಿಯೋಜಿಸಲಾಗಿತ್ತು. ಅರಬ್ಬೀ ಸಮುದ್ರದಲ್ಲಿ ಕೆಲ ದಿನಗಳಿಂದ ಪ್ರಕ್ಷ್ಯುಬ್ಧ ವಾತಾವರಣ ಇದ್ದದ್ದರಿಂದ, ಅಲೆಗಳ ಸೆಳೆತಕ್ಕೆ ಸಿಲುಕಿ ದೋಣಿಯು ಸ್ವಲ್ಪ ದೂರ ತೇಲಿಕೊಂಡು ಹೋಗಿತ್ತು.
'ರಿಯಲ್ ಟೈಂ ಹವಾಮಾನ ದತ್ತಾಂಶ ಮತ್ತು ಸಮಗ್ರ ಕಾರ್ಯಾಚರಣೆ ಕೇಂದ್ರದ ದತ್ತಾಂಶವನ್ನು ಬಳಸಿಕೊಂಡು ನಾವು ಹಡಗು ಸಿಲುಕಿಕೊಂಡಿದ್ದ ಸಂಭವನೀಯ ಸ್ಥಳವನ್ನು ಲೆಕ್ಕ ಹಾಕಿದ್ದೇವೆ' ಎಂದು ಪ್ರಕಟಣೆ ತಿಳಿಸಿದೆ.
ಶನಿವಾರ, ಡಾರ್ನಿಯರ್ ವಿಮಾನವು ಸಮುದ್ರದಲ್ಲಿ ಸಿಲುಕಿದ್ದ ದೋಣಿಯನ್ನು ಪತ್ತೆಹಚ್ಚಿತು. ಬಳಿಕ ಕರಾವಳಿ ರಕ್ಷಣಾ ಪಡೆಯು, ಆ ಸ್ಥಳಕ್ಕೆ ತೆರಳಿ ತುರ್ತು ನೆರವು ನೀಡಲು, ದೋಣಿಯನ್ನು ದಡಕ್ಕೆ ಎಳೆದು ತರಲು ನೆರವಾಗುವಂತೆ ಹಾಗೂ ದೋಣಿಯ ಸ್ಟೇರಿಂಗ್ ದುರಸ್ತಿಗೊಳಿಸಲು ಸಹಾಯ ಮಾಡುವಂತೆ ಕಸ್ತೂರಬಾ ಗಾಂಧಿ ಹಡಗಿಗೆ ಸೂಚನೆ ನೀಡಲಾಗಿತ್ತು
ನಂತರ ಕೋಸ್ಟ್ ಗಾರ್ಡ್ ಮತ್ತೊಂದು ಮೀನುಗಾರಿಕಾ ದೋಣಿಯೊಂದಿಗೆ ಸಮನ್ವಯ ಸಾಧಿಸಿ ಐಎಫ್‌ಬಿ ಸ್ಯಾಂಟ್ ಆಂಟನ್-I ಅನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದುಕೊಂಡು ಹೋಗಿ, ಎಲ್ಲಾ 31 ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
Advertisement