

ಬೆಂಗಳೂರು: ಕರ್ನೂಲ್ ಬಸ್ ದುರಂತ ಘಟನೆ ಬಳಿಕ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್ ಗಳಲ್ಲಿ ಸುರಕ್ಷತಾ ಆಡಿಟ್ ನಡೆಸಲು ಮುಂದಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮಾತನಾಡಿ, ರಾಜ್ಯದ ಎಲ್ಲಾ ಖಾಸಗಿ ಬಸ್‌ಗಳು ಮತ್ತು ಸರ್ಕಾರಿ ಬಸ್‌ಗಳಲ್ಲಿ ತುರ್ತು ನಿರ್ಗಮನಗಳು ಮತ್ತು ಸುರಕ್ಷತಾ ಸಾಧನಗಳಿವೆಯೇ ಎಂದು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸುತ್ತಿವೆ. ಬಸ್ ಗಳ ನಿರ್ವಾಹಕರು ಬಸ್ ಗಳ ತುರ್ತು ಬಾಗಿಲು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಲಗೇಜ್ ವಿಭಾಗಗಳಲ್ಲಿ ಯಾವುದೇ ಸುಡುವ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಎಸಿ ಬಸ್‌ಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಇರಬೇಕು. ನಾನು ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗಲೂ 2013 ರ ಬಸ್ ಬೆಂಕಿ ದುರಂತದ ನಂತರ ತುರ್ತು ನಿರ್ಗಮನಗಳನ್ನು ಕಡ್ಡಾಯಗೊಳಿಸಿದ್ದೆ ಎಂದು ತಿಳಿಸಿದ್ದಾರೆ.
ಬಸ್ಸುಗಳ ಫಿಟ್‌ನೆಸ್ ನವೀಕರಣದ ಸಮಯದಲ್ಲಿ, ತುರ್ತು ನಿರ್ಗಮನಗಳು ಮತ್ತು ಸುತ್ತಿಗೆಗಳನ್ನು ಪರಿಶೀಲಿಸಲಾಗುತ್ತದೆ. ವಾಹನವು ಎಂಟು ವರ್ಷಗಳನ್ನು ಪೂರ್ಣಗೊಳಿಸುವವರೆಗೆ, ಪ್ರತಿ ಎರಡು ವರ್ಷಗಳಿಗೊಮ್ಮೆ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಪ್ರಯಾಣಿಕ ವಾಹನಗಳು ಮಾನ್ಯ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಹೊಂದಿವೆ ಎಂಬುದನ್ನು ನಾವು ಪರಿಶೀಲಿಸುತ್ತಲೇ ಇರುತ್ತೇನೆಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಅಧಿಕಾರಿ ಮಾತನಾಡಿ, ವಾಣಿಜ್ಯ ಸರಕುಗಳನ್ನು ಸಾಗಿಸಲು ಕಠಿಣ ನಿಯಮ ಜಾರಿ ಮಾಡುವ ಅಗತ್ಯವಿದೆ. ಏಕೆಂದರೆ, ಪ್ರಸ್ತುತ ನಿಯಮ ಉಲ್ಲಂಘನೆಗಳಿಗೆ ಕೇವಲ 5,000 ರೂ. ದಂಡ ಮಾತ್ರ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement