

ಬೆಂಗಳೂರು: ಮೂರನೇ ಸಂಬಂಧ ಹೊಂದಿರುವ ಅನುಮಾನದಿಂದ 35 ವರ್ಷದ ನಾಲ್ಕು ಮಕ್ಕಳ ಮನೆಗೆಲಸದ ಮಹಿಳೆಯನ್ನು ಆಕೆ ಅನೈತಿಕ ಸಂಬಂಧ ಇಟ್ಟುಕೊಂಡವರೇ ಕೊಂದಿರುವ ಘಟನೆ ಬೆಂಗಳೂರಿನ ತಿಲಕ್ ನಗರದಲ್ಲಿ ನಡೆದಿದೆ. ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ತಿಲಕ್ ನಗರ ಪೊಲೀಸ್ ಠಾಣೆಯ ಸಮೀಪದ ಎಲ್‌ಐಸಿ ಕಾಲೋನಿಯ ಡಿ-ಮಾರ್ಟ್ ಬಳಿ ಆಟೋರಿಕ್ಷಾದಲ್ಲಿ ಕಂಬಳಿಯಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ಶವ ಶನಿವಾರ ಪತ್ತೆಯಾಗಿದೆ.
ಆರೋಪಿಗಳನ್ನು ಪ್ಲಂಬರ್ ಸುಬ್ರಹ್ಮಣ್ಯ (30) ಮತ್ತು ಆತನ ಸ್ನೇಹಿತ ಸೆಂಥಿಲ್ (25) ಎಂದು ಗುರುತಿಸಲಾಗಿದೆ. ಮೃತರನ್ನು ಮನೆಕೆಲಸಗಾರ್ತಿ ಸಲ್ಮಾ ಎಂದು ಗುರುತಿಸಲಾಗಿದ್ದು, ನಾಲ್ವರು ಮಕ್ಕಳು ಹೊಂದಿದ್ದ ಆಕೆ ವಿದವೆಯಾಗಿದ್ದರು.
ಆಕೆಯ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಇವರೆಲ್ಲರೂ ತಿಲಕ್ ನಗರದ ರಾಗಿ ಗುಡ್ಡ ಕೊಳೆಗೇರಿ ನಿವಾಸಿಗಳು ಎನ್ನಲಾಗಿದೆ.
ಮೂರನೇ ಸಂಬಂಧ ಇತ್ತಾ?
ಇಬ್ಬರೂ ಆರೋಪಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸಲ್ಮಾ, ಶುಕ್ರವಾರ ರಾತ್ರಿ ಸುಬ್ರಹ್ಮಣ್ಯ ಮನೆಗೆ ಹೋಗಿದ್ದಾರೆ. ಅಲ್ಲಿ ಸೆಂಥಿಲ್ ಕೂಡ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮದ್ಯ ಸೇವಿಸಿದ್ದಾರೆ. ಆಗ ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದರಿಂದ ಆಕೆಗೆ ಬೇರೆ ಸಂಬಂಧ ಇದೆ ಎಂದು ಆರೋಪಿಗಳಿಬ್ಬರು ಶಂಕಿಸಿದ್ದಾರೆ. ತದನಂತರ ರಾತ್ರಿ 10.30ರ ಸುಮಾರಿಗೆ ವಾಗ್ವಾದ ನಡೆದಿದ್ದು, ಸುಬ್ರಹ್ಮಣ್ಯ ಮರದ ದೊಣ್ಣೆಯಿಂದ ಸಲ್ಮಾ ಅವರ ತಲೆಗೆ ಹಲವು ಬಾರಿ ಹೊಡೆದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಆಟೋರಿಕ್ಷಾದಲ್ಲಿ ಶವ ಇಟ್ಟು ಪರಾರಿ:
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆರೋಪಿಗಳು ಆಕೆಯ ಶವವನ್ನು ಕಂಬಳಿಯಲ್ಲಿ ಸುತ್ತಿ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿದ್ದ ಆಟೋರಿಕ್ಷಾದಲ್ಲಿ ಇರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಸ್ಥಳೀಯರೊಬ್ಬರು ಆಟೋರಿಕ್ಷಾದೊಳಗೆ ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಪುರಾವೆಗಳನ್ನು ವಿಶ್ಲೇಷಿಸಿದ ನಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement