

ಬೆಂಗಳೂರು: ಪಿಜಿ ಉದ್ಯಮ ನಡೆಸುತ್ತಿರುವವರು ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಅನಧಿಕೃತ ಪೇಯಿಂಗ್ ಗೆಸ್ಟ್‌ಗಳಿಗೆ (ಪಿಜಿ) ಬೀಗ ಹಾಕಲಾಗುತ್ತದೆ ಎಂದು ಪಿಜಿಗಳ ನಿರ್ವಾಹಕರಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ಪೂರ್ವ ನಗರ ನಿಗಮದ ಹೆಚ್ಚುವರಿ ಆಯುಕ್ತ ಶ್ರೀ ಲೋಖಂಡೇ ಸ್ನೇಹಲ್ ಸುಧಾಕರ್ ಅವರು ಮಾತನಾಡಿ, ಹಲವಾರು ಪಿಜಿಗಳು ಪರವಾನಗಿಯನ್ನು ಪಡೆಯದೆ ಮತ್ತು ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಅಗತ್ಯ ಅನುಮತಿಗಳಿಲ್ಲದೆ ವಸತಿ ವಲಯಗಳಲ್ಲಿ ಕಾರ್ಯನಿರ್ವಹಿಸುವುದು, ಮೂಲಭೂತ ಸುರಕ್ಷತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸದಿರುವುದು, ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು, ಕಡ್ಡಾಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದಿರುವುದು ಸೇರಿದಂತೆ ಪ್ರಮುಖ ಉಲ್ಲಂಘನೆಗಳು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಅನಧಿಕೃತ ಪಿಜಿಗಳು ಸಾರ್ವಜನಿಕ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವುದರಿಂದ, ಬೆಂಗಳೂರು ಪೂರ್ವ ನಗರ ನಿಗಮವು ತನ್ನ ಮಿತಿಯೊಳಗಿನ ಅಕ್ರಮ ಕಾರ್ಯಾಚರಣೆಗಳನ್ನು ಗುರುತಿಸಲು ಮತ್ತು ನಿಯಂತ್ರಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ.
ವ್ಯಾಪಾರ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಿಜಿ ಮಾಲೀಕರು ಮತ್ತು ಹಾಸ್ಟೆಲ್ ನಿರ್ವಾಹಕರು ಸಾರ್ವಜನಿಕ ಸೂಚನೆಯ ದಿನಾಂಕದಿಂದ ಏಳು ದಿನಗಳ ಒಳಗೆ ಪರವಾನಗಿ ಪಡೆಯಬೇಕ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಹಾಗೂ ಆವರಣವನ್ನು ಸೀಜ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ, 2024 ರ ಪ್ರಕಾರ ಮತ್ತು ಬೆಂಗಳೂರು ಆಡಳಿತ ಕಾಯ್ದೆ, 2024 ರ ಪ್ರಕಾರ, ಈ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದ ಯಾವುದೇ ಪೇಯಿಂಗ್ ಗೆಸ್ಟ್ ಅಥವಾ ಹಾಸ್ಟೆಲ್ ವ್ಯವಹಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
Advertisement