

ಬೆಂಗಳೂರು: ಪೊಲೀಸ್ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಲಂಚ ಪಡೆದರೂ ಸರ್ಕಾರ ಸಹಿಸುವುದಿಲ್ಲ. ಈ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್) ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ ಶಿವಕುಮಾರ್ ಕೆ ಅವರು ಪ್ರತಿಯೊಂದು ಹಂತದಲ್ಲೂ ಹೇಗೆಲ್ಲ ಲಂಚಕ್ಕೆ ಬೇಡಿಕೆ ಇಡಲಾಯಿತು ಎನ್ನುವ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.
'ನಾವು ಹಣ (ಲಂಚ) ಕೇಳುವ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಅದು ಪೊಲೀಸರಾಗಿರಲಿ ಅಥವಾ ಯಾವುದೇ ಸರ್ಕಾರಿ ಇಲಾಖೆಯಾಗಿರಲಿ. ನಾವು ಎಂದಿಗೂ ಲಂಚವನ್ನು ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸುವುದಿಲ್ಲ. ಮಾಹಿತಿ ಸಿಕ್ಕ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇವೆ, ಇಲಾಖಾ ವಿಚಾರಣೆಯನ್ನು ಪ್ರಾರಂಭಿಸುತ್ತೇವೆ ಮತ್ತು ಅವರನ್ನು ಅಮಾನತುಗೊಳಿಸುತ್ತೇವೆ. ಆರೋಪಗಳು ಸಾಬೀತಾದಾಗ, ಅವರನ್ನು ಸೇವೆಯಿಂದ ವಜಾಗೊಳಿಸುವ ಮಟ್ಟಿಗೆ ನಾವು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ' ಎಂದು ಪರಮೇಶ್ವರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಂತಹ ಘಟನೆಗಳು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಅಥವಾ ನಮ್ಮ ಗಮನಕ್ಕೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ನಿರ್ದಿಷ್ಟ ಸೂಚನೆ ನೀಡಲಾಗಿದೆ. ಪೊಲೀಸ್ ಕಾನ್ಫರೆನ್ಸ್‌ಗಳಲ್ಲಿ ಸಿಎಂ ಕೂಡಾ ಇದನ್ನೇ ಹೇಳಿದ್ದಾರೆ. ಇಂತಹ ಘಟನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಡಿಜಿ ಅವರಿಗೆ ಸೂಚನೆಯನ್ನು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ತಮ್ಮ 34 ವರ್ಷದ ಮಗಳು ಮೆದುಳಿನ ರಕ್ತಸ್ರಾವದಿಂದ ಸಾವಿಗೀಡಾದ ನಂತರ, ಆಂಬ್ಯುಲೆನ್ಸ್ ಸೇವೆಯಿಂದ ಹಿಡಿದು ಎಫ್‌ಐಆರ್ ಪ್ರತಿ, ಅಂತ್ಯಕ್ರಿಯೆ ಮತ್ತು ಮರಣ ಪ್ರಮಾಣಪತ್ರ ಪಡೆಯುವವರೆಗೂ ಪ್ರತಿ ಹಂತದಲ್ಲಿಯೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶಿವಕುಮಾರ್ ಆರೋಪಿಸಿದ್ದರು.
ಬೆಳ್ಳಂದೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ವಿರುದ್ಧವೂ ಲಂಚ ಕೇಳಿದ್ದ ಮತ್ತು ಕೆಟ್ಟದಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದ ಅವರು, ನಮ್ಮ ಸ್ಥಿತಿಯೇ ಹೀಗಾದರೆ ಬಡವರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದರು.
ನಂತರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಯಿತು.
Advertisement