

ಬೆಂಗಳೂರು: ನಗರದ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ರಸ್ತೆ ನಿರ್ಮಿಸಲು ಕರೆಯಲಾಗಿದ್ದ ಜಾಗತಿಕ ಟೆಂಡರ್‌ನಲ್ಲಿ ಯಾವುದೇ ಕಂಪನಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ಬಿಡ್ ಸಲ್ಲಿಕೆ ಅವಧಿಯನ್ನು ನವೆಂಬರ್ 11 ರವರೆಗೆ ವಿಸ್ತರಿಸಲಾಗಿದೆ.
ನಗರದ ವಾಹನ ದಟ್ಟಣೆ ತಗ್ಗಿಸಲು 16.745 ಕಿ.ಮೀ. ಉದ್ದದ ಟ್ವಿನ್ ಟ್ಯೂಬ್ ಟನಲ್ ನಿರ್ಮಿಸಲು ಬಿ-ಸ್ಮೈಲ್‌ನಿಂದ ಟೆಂಡರ್ ಆಹ್ವಾನಿಸಲಾಗಿತ್ತು. ಬಿಡ್ ಸಲ್ಲಿಕೆಗೆ ಅಕ್ಟೋಬರ್ 29 ಕೊನೆಯ ದಿನವಾಗಿತ್ತು.
ಜುಲೈ 16 ರಂದು ಟೆಂಡರ್‌ಗಳನ್ನು ಆಹ್ವಾನಿಸಲಾಗಿತ್ತು. ಸೆಪ್ಟೆಂಬರ್ 3 ಕೊನೆಯ ದಿನವಾಗಿತ್ತು. ಯೋಜನೆಗೆ ಅದಾನಿ ಗ್ರೂಪ್, ಎಲ್ ಆ್ಯಂಡ್ ಟಿ, ಟಾಟಾ ಪ್ರಾಜೆಕ್ಟ್ಸ್ ಸೇರಿದಂತೆ ದೇಶದ ಪ್ರಮುಖ ಹತ್ತು ಸಂಸ್ಥೆಗಳು ನಗರದಲ್ಲಿನ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿವೆ ಎಂದು ಹೇಳಲಾಗುತ್ತಿತ್ತು.
ನಂತರ ಈ ಟೆಂಡರ್ ಅವಧಿಯನ್ನು ಸೆ.3ರಿಂದ ಸೆ.30ಕ್ಕೆ ವಿಸ್ತರಿಸಲಾಯಿತು. ನಂತರ, ಅ.29ರ ಗಡುವು ನೀಡಲಾಗಿತ್ತು. ಇದೀಗ ಮತ್ತೆ ಅವಧಿಯನ್ನು ವಿಸ್ತರಿಸಿ, ನ.11ರವರೆಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಿಡ್ ಪೂರ್ವಭಾವಿ ಸಭೆಯಲ್ಲಿ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಒಲವು ತೋರಿದ್ದ ಹಲವು ಕಂಪನಿಗಳು, ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಸುರಂಗ ರಸ್ತೆಗಳ ಯೋಜನೆಯ ಬಿಡ್ಡಿಂಗ್ ಗಡುವನ್ನು ಮತ್ತೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ಯೋಜನೆಯನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸಿ ಎರಡು ಪ್ಯಾಕೇಜ್‌ಗಳಡಿ ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ, ಪ್ಯಾಕೇಜ್-1ರಡಿ (ಉತ್ತರ) ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಶೇಷಾದ್ರಿ ರಸ್ತೆವರೆಗೆ 8.748 ಕಿ.ಮೀ. ಹಾಗೂ ಪ್ಯಾಕೇಜ್-2 ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಟ್‌ಬೋರ್ಡ್ ಜಂಕ್ಷನ್‌ವರೆಗೆ 8.748 ಕಿ.ಮೀ. ಉದ್ದದ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ 17,780 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಯೋಜನೆ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ನಮ್ಮ ಆಸಕ್ತಿಯನ್ನು ನೋಡಿ ಜನರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬರುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
Advertisement