
ಬೆಂಗಳೂರು: ಬ್ಯೂಟಿಷಿಯನ್ ಮೇಲೆ ಖಾರದ ಪುಡಿ ಎರಚಿ ದರೋಡಗೆ ಯತ್ನ ನಡೆಸಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಚನ್ನಪಟ್ಟಣ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಕೃತಿಕಾ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಚನ್ನಪಟ್ಟಣ ಪಟ್ಟಣದ ನಿವಾಸಿ ಸರಿತಾ (44) ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಸಭಿಹಾ ಬಾನು (30) ಎಂಬ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ಮಹಿಳೆ ಕೂಡ ಚನ್ನಪಟ್ಟಣ ಪಟ್ಟಣದ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 12.30 ರ ಸುಮಾರಿಗೆ ಪಾರ್ಲರ್‌ಗೆ ಬಂದ ಆರೋಪಿತ ಮಹಿಳೆ, ತಾನು ಯಾರಿಗೋ ಕಾಯುತ್ತಿದ್ದೇನೆ ಎಂದು ಹೇಳಿ ಆಕೆ ತನ್ನ ಸರದಿಯನ್ನು ವಿಳಂಬ ಮಾಡುತ್ತಲೇ ಇದ್ದಳು. ಸುಮಾರು ಎರಡು ಗಂಟೆಗಳ ನಂತರ ಸರಿತಾ ಒಬ್ಬಂಟಿಯಾಗಿರುವುದನ್ನು ಗಮನಿಸಿ, ಮುಖದ ಮೇಲೆ ಖಾರದ ಪುಡಿ ಎರಚುವ ಮೂಲಕ ಹಲ್ಲೆ ನಡೆಸಿದ್ದಾಳೆ. ಬಳಿಕ ಮಂಗಳ ಸೂಕ್ತ ಕಸಿದು ಪರಾರಿಯಾಗಲು ಯತ್ನಿಸಿದ್ದಾಳೆ.
ಈ ವೇಳೆ ಉರಿ ತಾಳಲಾರದೆ ಹೊರ ಹೊದ ಸರಿತಾ ಅವರು, ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ಹತ್ತಿರದ ಮೆಡಿಕಲ್ ಸ್ಟೋರ್‌ನ ಮಾಲೀಕ ರವಿ ಅವರು ರಕ್ಷಣೆಗೆ ಧಾವಿಸಿದ್ದು, ಇದೇ ವೇಳೆ ಆರೋಪಿತ ಮಹಿಳೆಯನ್ನೂ ಹಿಡಿದಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿತ ಮಹಿಳೆಯಿಂದ 2 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದ್ದು, ಈಕೆಯ ಪೂರ್ವಾಪರಗಳನ್ನು ಪರಿಶೀಲಿಸುತ್ತಿದ್ದೇವೆಂದು ತಿಳಿಸಿದ್ದಾರೆ.
ಚನ್ನಪಟ್ಟಣ ಪೂರ್ವ ಪೊಲೀಸರು ಸಭಿಹಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 309 (4) ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದಾರೆ.
Advertisement