
ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳಡಿ ಸಲವತ್ತು ನೀಡಲು ಫಲಾನುಭವಿಗಳಿಂದ ನಿಗಮದ ಅಧ್ಯಕ್ಷರೇ ಶೇ. 60ರಷ್ಟು ಲಂಚ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಆರೋಪ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ.
ನಿನ್ನೆ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಭೋವಿ ಸಮುದಾಯದ ನಾಯಕ ಡಾ. ವೆಂಕಟೇಶ್ ಮೌರ್ಯ ಅವರು, ಭೂ ಒಡೆತನ ಯೋಜನೆ ಅಡಿಯಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಂದ ಶೇಕಡ 60ರಷ್ಟು ಲಂಚ ನೀಡುವಂತೆ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರು ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ರವಿಕುಮಾರ್ ಅವರು ಭೋವಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು, ಸಮುದಾಯದ ಜನರ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಹಂಚಿಕೆ ಮಾಡಲು ಲಂಚದ ಬೇಡಿಕೆ ಇಡುತ್ತಿದ್ದಾರೆ. ಜವಾಬ್ದಾರಿಯುತ ಹುದ್ದೆಯಲ್ಲಿರುವ ಇವರು ಫಲಾನುಭವಿಗಳಿಂದ ಲಂಚ ಪಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ರವಿಕುಮಾರ್ ಅವರು ನಿಗಮದಲ್ಲಿರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವುದನ್ನು ಬಿಟ್ಟು, ಮಧ್ಯವರ್ತಿಗಳ ಮೂಲಕ ಹಣ ನೀಡುವಂತೆ ಫಲಾನುಭವಿಗಳಿಗೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ಅವರು ಮಾತನಾಡಿರುವ ವಿಡಿಯೊ ಹಾಗೂ ಆಡಿಯೊಗಳು ನನ್ನ ಬಳಿ ಇವೆ. ಕೂಡಲೇ ರವಿಕುಮಾರ್ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಅವರ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಏತನ್ಮಧ್ಯೆ ವಿಪಕ್ಷ ನಾಯಕ ಆರ್. ಅಶೋಕ ಕೂಡ ಭ್ರಷ್ಟಾಚಾರ ಆರೋಪಗಳ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಣವನ್ನ ತೆಲಂಗಾಣ ಚುನಾವಣೆಗೆ, ಲೋಕಸಭೆ ಚುನಾವಣೆಗೆ ಬಳಸಿಕೊಂಡು ನುಂಗಿ ನೀರು ಕುಡಿದಿದ್ದಾಯ್ತು. ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ SCSP/TSP ನಿಧಿಯಲ್ಲಿ ಪ್ರತಿ ವರ್ಷ 15,000 ಕೋಟಿ ರೂಪಾಯಿ ಹಣವನ್ನ ಬೇರೆಡೆ ವರ್ಗಾಯಿಸಿ ದಲಿತರಿಗೆ ಅನ್ಯಾಯ ಮಾಡಿದ್ದಾಯ್ತು.
ಈಗ ಬೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ಹಣ ನೀಡಲು ನಿಗಮದ ಅಧ್ಯಕ್ಷರು ಕಮಿಷನ್ ಕೇಳುತ್ತಿರುವ ಹಗರಣ ಬಲಿಯಾಗಿದೆ. ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ಹಣ ಬಿಡುಗಡ ಸಹಾಯಧನ ಬಿಡುಗಡೆ ಮಾಡಲು 5 ಲಕ್ಷ ಕಮಿಷನ್ ಗೆ ಬೇಡಿಕೆ ಇಟ್ಟಿರುವ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಕಮಿಷನ್ ದಂಧೆ, ಲಂಚಗುಳಿತನ, ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದ್ದಾರೆ.
ಸಿದ್ದರಾಮಯ್ಯ ಅವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನ ಸ್ವತಃ ತಾವೇ ಸದನದಲ್ಲಿ ಒಪ್ಪಿಕೊಂಡಿದ್ದೀರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ SCSP/TSP ಹಣದ ದುರ್ಬಳಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅಕ್ರಮ ಸಾಕ್ಷಿ ಸಮೇತ ಬಹಿರಂಗವಾಗಿದೆ. ಇಷ್ಟಾದರೂ ತಾವು ಕುರ್ಚಿಗೆ ಅಂಟಿಕೊಂಡು ಕೂರುತ್ತೀರಿ ಎಂದರೆ ನಿಮ್ಮ ಭಂಡತನಕ್ಕೆ ನೀವೇ ಸಾಟಿ. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಇದ್ದರೆ ತಾವು ಇನ್ನೊಂದು ಕ್ಷಣವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ದೇಶದಲ್ಲಿ ಲೂಟಿಕೋರತನದ ಲಂಚಪೀಡಕ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ನಿಸ್ಸಂಶಯವಾಗಿ ಹೇಳಲು ಇದೀಗ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ, ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಂದ ನೇರ ವಸೂಲಿಗೆ ಇಳಿದಿರುವ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಭೂ ಒಡೆತನ ಯೋಜನೆಯಡಿ ಲಂಚ ಕೇಳಿ ಸಿಕ್ಕಿಬಿದ್ದಿರುವ ಪ್ರಕರಣ ಅತ್ಯಂತ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಹೇಳಿದ್ದಾರೆ.
ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಈ ಮೊದಲು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕಿತ್ತು, ನಂತರ ಪರಿಶಿಷ್ಟರು, ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನೂ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿತು. ಇದೀಗ ಭೋವಿ ಸಮುದಾಯದ ಅಭಿವೃದ್ಧಿ ನಿಗಮದ ಫಲಾನುಭವಿಗಳಿಂದ ವಸೂಲಿಗಿಳಿದಿರುವುದು ನಿಜಕ್ಕೂ ನಾಡಿಗೆ ದುರಂತದ ದೌರ್ಭಾಗ್ಯವೇ ಸರಿ.
ಭೋವಿ ಸಮುದಾಯದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಬೇಕಿದ್ದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರೇ ವಸೂಲಿಗಿಳಿದಿರುವ ಘಟನೆ ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ'. ಈ ಸಂಬಂಧ ಕೂಡಲೇ ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.
Advertisement