
ಬೆಂಗಳೂರು: ರಾಮನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಾರಾಮಾರಿ ನಡೆಸಿದ ಆರೋಪದ ಮೇಲೆ 23 ವಿಚಾರಣಾಧೀನ ಕೈದಿಗಳ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.
ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಮುಂದಾದ ಕಾರಾಗೃಹದ ಅಧೀಕ್ಷಕ, ಅಧಿಕಾರಿಗಳು, ಸಿಬ್ಬಂದಿ ಸೇರಿ 9 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆ. 28ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ 23 ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕೈದಿಗಳಾದ ದೇವರಾಜು, ಚರಣ, ಪುನೀತ್ ಕುಮಾರ್ ಅಲಿಯಾಸ್ ಔಟು, ಪ್ರಮೋದ್ ಅಲಿಯಾಸ್ ಚುಂಚ, ಅಭಿಷೇಕ್ ಅಲಿಯಾಸ್ ಅಭಿ, ಅರುಣ, ಭರತ ಅಲಿಯಾಸ್ ಗುಡ್ಡೆ, ಚಂದನ್, ಭರತ್, ಹರ್ಷ ಅಲಿಯಾಸ್ ಕೈಮ್, ಪ್ರಮೋದ್ ಅಲಿಯಾಸ್ ಕರಿಯ, ಸಿದ್ದರಾಜು ಅಲಿಯಸ್ ಸೀಜಿಂಗ್ ಸಿದ್ದ, ಶಾಂತಮೂರ್ತಿ ಎಲ್., ಮಹೇಶ್ ಗೌಡ ಅಲಿಯಾಸ್ ಇಂಗ್ಲಿಷ್, ಪ್ರಶಾಂತ್ ನಾಯ್ಕ, ಶ್ರೀನಿವಾಸ ಪ್ರಭು ಅಲಿಯಾಸ್ ಬಬ್ಲಿ, ವರುಣ, ರಜಿತ್, ಹರೀಶ್, ದರ್ಶನ್, ಯಶವಂತ ಹಾಗೂ ಸುಮಂತ್ ಅಲಿಯಾಸ್ ಅಪ್ಪುಕ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಗುರುವಾರ ಸಂಜೆ 5.30ರ ಸುಮಾರಿಗೆ ಡಿಗೇಟ್ ಬಳಿ ಸಂದರ್ಶನ ಸಮಯದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕೈದಿಗಳಲ್ಲಿ ಎರಡು ಗುಂಪುಗಳು ಏರ್ಪಟ್ಟಿದ್ದು, ಎರಡು ಗುಂಪುಗಳ ನಾಯಕರಾದ ಟಿ ದೇವರಾಜು ಮತ್ತು ಹರ್ಷ ಅಲಿಯಾಸ್ ಕೈಮಾ ತಮಗೆ ಸಂದರ್ಶನ ಇದೆಯೇ ಎಂದು ಕೇಳಿಕೊಂಡು ವೀಕ್ಷಕ ಮಂಜುನಾಥ ಪೂಜಾರ ಅವರ ಬಳಿ ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಇಲ್ಲ ಎಂದು ಹೇಳಿದ್ದು, ಬಳಿಕ ಇಬ್ಬರೂ ಬೈದಾಡಿಕೊಂಡು ಕೂಗಾಡಿದ್ದಾರೆ. ಸಿಬ್ಬಂದಿ ಗಲಾಟೆ ಮಾಡದಂತೆ ತಾಕೀತು ಮಾಡಿದ್ದಾರೆ.
ಬಳಿಕ ಎರಡೂ ಗುಂಪುಗಳ ಕೈದಿಗಳು ಹೊರಬಂದು ಪರಸ್ಪರ ಬೈದಾಡಿಕೊಂಡಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗುಂಪನ್ನು ಚದುರಿಸಿ ಗಲಾಟೆ ತಣ್ಣಗಾಗಿಸಿದರು. ಈ ವೇಳೆ ಸಿಬ್ಬಂದಿ ಹಾಗೂ ಕೆಲ ಕೈದಿಗಳಿಗೂ ಸಣ್ಣಪುಟ್ಟ ಗಾಯಗಳಾದವು ಎಂದು ಮೂಲಗಳು ತಿಳಿಸಿವೆ.
ಘಟನೆ ಬೆನ್ನಲ್ಲೇ ಐವರು ಕೈದಿಗಳನ್ನು ಮಂಡ್ಯ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಇತರನನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲು ಉನ್ನತಾಧಿಕಾರಿಗಳ ಸೂಚನೆಗಳಿಗೆ ಕಾಯುತ್ತಿದ್ದೇವೆಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಕೈದಿಗಳಿಗೂ ಗಾಯಗಳಾಗಿಲ್ಲ. ಕೇವಲ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಡೆದ ತಳ್ಳಾಟದಲ್ಲಿ ಜೈಲಿನ ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾರ್ವಜನಿಕ ಸೇವಕರನ್ನು ಕರ್ತವ್ಯದಿಂದ ತಡೆದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 132 ರ ಅಡಿಯಲ್ಲಿ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement