News Headlines 02-09-25 | Greater Bengaluru ಪ್ರಾಧಿಕಾರ ರಚನೆಗೆ ಅಧಿಸೂಚನೆ; ನಟಿ ರನ್ಯಾ ರಾವ್ ಗೆ 102 ಕೋಟಿ ರೂ ದಂಡ; Dharmasthala Case: BJP ದ್ವಿಮುಖ ನೀತಿ- ಸಿಎಂ ಟೀಕೆ!

News Headlines 02-09-25 | Greater Bengaluru ಪ್ರಾಧಿಕಾರ ರಚನೆಗೆ ಅಧಿಸೂಚನೆ; ನಟಿ ರನ್ಯಾ ರಾವ್ ಗೆ 102 ಕೋಟಿ ರೂ ದಂಡ; Dharmasthala Case: BJP ದ್ವಿಮುಖ ನೀತಿ- ಸಿಎಂ ಟೀಕೆ!

1. Greater Bengaluru ಐದು ಮಹಾನಗರ ಪಾಲಿಕೆ ರಚನೆಗೆ ಅಧಿಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇನ್ನು ಇತಿಹಾಸದ ಪುಟ ಸೇರಿದ್ದು, ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ರಾಜ್ಯ ಸರ್ಕಾರ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಮಹಾನಗರ ಪಾಲಿಕೆಗಳನ್ನಾಗಿ ರಚನೆ ಮಾಡಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ 2024ರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ಈ ಮೂಲಕ ಬೆಂಗಳೂರು ಪಶ್ಚಿಮ ನಗರ ಮಹಾನಗರ ಪಾಲಿಕೆ, ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ, ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗಳ ರಚನೆಗೆ ದಾರಿ ಮಾಡಿಕೊಡುತ್ತದೆ. ಅಧಿಸೂಚನೆಯಲ್ಲಿ ಐದು ನಿಗಮಗಳ ಗಡಿಗಳನ್ನು ಸಹ ನಿಗದಿಪಡಿಸಲಾಗಿದೆ.

2. ನಟಿ Ranyaraoಗೆ 102 ಕೋಟಿ ದಂಡ

ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾರಾವ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ರನ್ಯಾ ರಾವ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯು 102.55 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಿದೆ. ರನ್ಯಾ ರಾವ್ ಅವರು ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಹೀಗಾಗಿ ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ಡಿಆರ್ಐ ಅಧಿಕಾರಿಗಳು ವಸೂಲಿ ಮಾಡಬೇಕಿರುವುದರಿಂದ ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ. ಇಂದು ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರು ಆರೋಪಿಗಳಿಗೆ DRI ನೋಟಿಸ್ ನೀಡಿದೆ. ಕಾಫಿಪೋಸಾ ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಒಂದು ವರ್ಷದವರೆಗೂ ರನ್ಯಾ ರಾವ್ ಗೆ ಜಾಮೀನು ಸಿಗುವುದಿಲ್ಲ.

3. Dharmasthala Case: BJP ದ್ವಿಮುಖ ನೀತಿ

ಧರ್ಮಸ್ಥಳ ಮತ್ತು ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಧರ್ಮಾಧಿಕಾರಿಯನ್ನು ಬೆಂಬಲಿಸಿ ಬಿಜೆಪಿ ಯಾತ್ರೆ ಕೈಗೊಂಡಿತ್ತು. ಮತ್ತೊಂದೆಡೆ, ಸೌಜನ್ಯ ಕುಟುಂಬದವರು ಹೊಸ ತನಿಖೆಗಾಗಿ ಸುಪ್ರೀಂ ಕೋರ್ಟ್ ಸಂಪರ್ಕಿಸಬೇಕೆಂದು ಅವರೇ ಸಲಹೆ ನೀಡುತ್ತಿದ್ದಾರೆ. ಬಿಜೆಪಿ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುತ್ತಿದ್ದರೆ, ಸೌಜನ್ಯ ಕುಟುಂಬ ಹೊಸದಾಗಿ ತನಿಖೆ ನಡೆಸಲು ಅನುಮತಿಗಾಗಿ ಕೋರ್ಟ್ ಸಂಪರ್ಕಿಸುವಂತೆ ಅವರು ಏಕೆ ಬಯಸುತ್ತಾರೆ? ಎಂದು ಪ್ರಶ್ನಿಸಿದರು. ಏತನ್ಮಧ್ಯೆ, ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಅಗತ್ಯವಿಲ್ಲ. ನಾವು ವಿಶೇಷ ತನಿಖಾ ತಂಡ ರಚಿಸಿದ್ದೇವೆ. ಅದು ತನಿಖೆ ನಡೆಸುತ್ತಿದೆ ಎಂದರು. ಬಿಜೆಪಿಯ ಉದ್ದೇಶ ಏನೆಂದು ನನಗೆ ತಿಳಿದಿಲ್ಲ. ತನಿಖೆಯಲ್ಲಿ ಯಾವುದೇ ತಪ್ಪುಗಳು ಇಲ್ಲ. ತನಿಖೆಗೆ ಅಡ್ಡಿಪಡಿಸಲು ಅವರು ಬಯಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

4. Embassy ಗ್ರೂಪ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಸಾವು

ಬೆಂಗಳೂರಿನ ಯಲಹಂಕದಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಎಂಬಸಿ ಗ್ರೂಪ್‌ಗೆ ಸೇರಿದ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಘಟನೆ ನಡೆದಿದ್ದು ಆಂಧ್ರ ಮೂಲದ ಶಿವ ಮತ್ತು ಮಧುಸೂದನ್ ರೆಡ್ಡಿ ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕರು ಮಣ್ಣು ಅಗೆಯುವ ಕೆಲಸದಲ್ಲಿ ತೊಡಗಿದ್ದಾಗ ಕಾರ್ಮಿಕರ ಮೇಲೆ ಮಣ್ಣಿನ ರಾಶಿ ಬಿದ್ದಿತ್ತು. ಕೂಡಲೇ ಅವರನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಲಹಂಕ ಪೊಲೀಸರು ಪರಿಶೀಲನೆ ನಡೆಸಿ ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

5. Dharmasthalacase FEMA ಅಡಿಯಲ್ಲಿ ತನಿಖೆಗೆ ED ಅಧಿಕೃತ ಎಂಟ್ರಿ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾಡಿರುವ ಆರೋಪ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ಈ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ವಿದೇಶಿ NGOಗಳಿಂದ ಹಣ ಫಂಡಿಂಗ್ ಆಗಿದೆ ಎಂಬ ಅನುಮಾನ ಮತ್ತು ಆರೋಪಗಳು ಕೇಳಿ ಬಂದಿದ್ದವು. FEMA ಅಡಿಯಲ್ಲಿ ED ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದು ತನಿಖೆಯಲ್ಲಿ ವಿದೇಶಿ ನಿಧಿ ನಿಯಮ ಉಲ್ಲಂಘನೆ ಮತ್ತು ನಿಧಿಯ ಅಕ್ರಮ ಬಳಕೆಯ ಸಾಕ್ಷಿಗಳು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com