
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬುಧುವಾರ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರ, ಕಾರಿನಲ್ಲಿದ್ದವರ ನಡುವೆ ನಡೆದ ಜಗಳ ವೃದ್ಧನ ಸಾವಿನಲ್ಲಿ ಅಂತ್ಯವಾಗಿದೆ.
ತನ್ನ ಮಗ ಮತ್ತು ಅಳಿಯನೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ 61 ವರ್ಷದ ವ್ಯಕ್ತಿ, ತನ್ನ ಕಾರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಬೈಕ್ ಸವಾರರೊಂದಿಗೆ ಜಗಳ ಮಾಡಿದ್ದಾರೆ. ಈ ವೇಳೆ ತಳ್ಳಾಟ ನೂಕಾಟದಲ್ಲಿ ಆ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‌ಟಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಚಿಕಿತ್ಸೆಗಾಗಿ ಬಂದಿದ್ದ ತಮ್ಮ ಕಾರನ್ನು ತಡೆದ ಬೈಕ್ ನಲ್ಲಿ ಆರೋಪಿಗಳು, ಮೃತ ವೃದ್ಧ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮೃತನನ್ನು ಕೌಸರ್ ನಗರದ ನಿವಾಸಿ ಸೈಯದ್ ನಿಸಾರ್ ಅಹ್ಮದ್(61) ಎಂದು ಗುರುತಿಸಲಾಗಿದೆ. ಅವರ ಮಗನಿಗೆ ಗಾಯವಾಗಿದೆ.
ಪ್ರಕರಣ ಸಂಬಂಧ ಹೆಬ್ಬಾಳ ನಿವಾಸಿ ಮತ್ತು ಡೆಲಿವರಿ ಎಕ್ಸಿಕ್ಯೂಟಿವ್ ಆಗಿರುವ ಅಬ್ದುಲ್ ಶರೀಫ್(30) ಮತ್ತು ಅವರ ಸ್ನೇಹಿತೆ ಜೆಸಿ ನಗರದ ನಿವಾಸಿ ತೆಹ್ರೀನ್ ಫಾತಿಮಾ(26)ರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಬುಧವಾರ ಬೆಳಗಿನ ಜಾವ 1.30 ರ ಸುಮಾರಿಗೆ ಅಸ್ವಸ್ಥರಾಗಿದ್ದ ನಿಸಾರ್ ಅಹ್ಮದ್ ಅವರನ್ನು ಅವರ ಕುಟುಂಬ ಆಸ್ಪತ್ರೆಗೆ ಕರೆತಂದಿತ್ತು. ಈ ವೇಳೆ ಆಸ್ಪತ್ರೆ ಮುಂದೆ ಇಬ್ಬರು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಅದೇ ವೇಳೆಗೆ ಇವರ ಕಾರು ಬಂದಿದ್ದು, ಮುಂದೆ ಹೋಗಲು ಜಾಗ ಬಿಡಲಿಲ್ಲವೆಂಬ ಕಾರಣಕ್ಕೆ ಬೈಕ್ ಸವಾರರ ಜೊತೆ ಜಗಳವಾಗಿದೆ. ಕಾರಿನಲ್ಲಿದ್ದವರು ಇಳಿದು ಹೊರ ಬಂದು ಬೈಕ್ ಸವಾರರ ಜೊತೆ ಜಗಳವಾಡುತ್ತಿದ್ದಾಗ ಸಯ್ಯದ್ ನಿಸಾರ್ ಅಹಮದ್ ಅವರು ಸಹ ಬಂದಿದ್ದಾರೆ.
ಆ ಸಂದರ್ಭದಲ್ಲಿ ಎರಡು ಕಡೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಕೈ ಕೈ ಮಿಲಾಯಿಸಿಕೊಂಡು ತಳ್ಳಾಟ ನೂಕಾಟವಾದಾಗ ಸಯ್ಯದ್ ನಿಸಾರ್ ಅಹಮದ್ ಅವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ವೈದ್ಯರು ಅಹ್ಮದ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಆದರೆ ಮರಣದ ನಿಖರವಾದ ಕಾರಣ
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement