GST ಸರಳೀಕರಣದಿಂದಾಗಿ ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ರೂ. ನಷ್ಟ: ಸಚಿವ ಕೃಷ್ಣ ಬೈರೇಗೌಡ ಕಳವಳ

ಹೊಸ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಎಸ್‌ಟಿ ಕೌನ್ಸಿಲ್ ಪರಿಹಾರ ನೀಡಬೇಕು.ರಾಜ್ಯಗಳಿಗೆ ಹೆಚ್ಚಿನ ನಷ್ಟವಾದರೆ ಅಂತಿಮವಾಗಿ ಜನ‌ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ.
krishna byeregowda
ಕಂದಾಯ ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸರಳೀಕರಣ ವ್ಯವಸ್ಥೆ ಪ್ರಸ್ತಾವನೆಯಿಂದ ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ರೂ. ನಷ್ಟವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ 70 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ 15 ಸಾವಿರ ಕೋಟಿ ರೂ. ನಷ್ಟತರಲಿದ್ದು, ಒಟ್ಟಾರೆ 85,000 ಕೋಟಿ ರೂ. ವಾರ್ಷಿಕ ಆದಾಯ ನಷ್ಟವನ್ನು ಎದುರು ಮಾಡಲಿದೆ ಎಂದು ಹೇಳಿದ್ದಾರೆ.

ಹೊಸ ಯೋಜನೆಯಡಿಯಲ್ಲಿ ಪ್ರತಿ ರಾಜ್ಯವು ಎಷ್ಟು ಕಳೆದುಕೊಳ್ಳಲಿದೆ ಎಂಬುದನ್ನು ವಿವರಿಸಲು ಕೇಂದ್ರವು ಯಾವುದೇ ಅಂದಾಜು ಅಥವಾ ಮಾರ್ಗಸೂಚಿಯನ್ನು ಒದಗಿಸಿಲ್ಲ. "ಜಿಎಸ್‌ಟಿ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಅವರು ಭರವಸೆ ನೀಡಿದ್ದರು. ಆದರೆ, ಅದು ವರ್ಷದಿಂದ ವರ್ಷಕ್ಕೆ ರಾಜ್ಯದ ಆದಾಯವನ್ನು ಕುಗ್ಗಿಸಿದೆ.

ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲಾ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್ಟಿ ಗೆ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1 ರಷ್ಟು ಇತ್ತು. ಆದರೆ, ಈಗ ಜಿಎಸ್ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ ಶೇ. 6.1 ಕ್ಕೆ ತಲುಪಲಾಗಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್ಟಿ ಕೊಡುಗೆ ಕೇವಲ ಶೇ. 5.8 ರಷ್ಟು ಮಾತ್ರ. ಒಟ್ಟರೆ ಜಿಎಸ್ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.

krishna byeregowda
ಬಿಜೆಪಿ ಶಾಸಕರೇ ಬ್ಲಾಕ್ ಮಾರ್ಕೆಟ್ ನಲ್ಲಿ ರೆಮಿಡಿಸಿವಿಯರ್ ಖರೀದಿಸಿ ಮಾರುತ್ತಿದ್ದಾರೆ: ಕೃಷ್ಣಬೈರೇಗೌಡ

ಜಿಎಸ್‌ಟಿ ಜಾರಿಗೊಂಡ ನಂತರ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು 2016-17ರಿಂದ 2024-25ಕ್ಕೆ ಹೋಲಿಸಿದರೆ ವಾರ್ಷಿಕ 21,977 ಕೋಟಿ ರೂ.ಕಡಿತವಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಕರ್ನಾಟಕಕ್ಕೆ ಬರುವ ಅನುದಾನ ವಾರ್ಷಿಕ 18,870 ಕೋಟಿ ರೂ. ಕಡಿತಗೊಂಡಿದೆ.

ಪ್ರಸ್ತಾವಿತ ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ನಷ್ಟವಾಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೂ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು 2.50 ಲಕ್ಷ ಕೋಟಿ ರೂ.ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ.

ಕೇಂದ್ರದ ಆದಾಯದಲ್ಲಿ ಜಿಎಸ್ಟಿ ಪಾಲು ಕೇವಲ ಶೇ. 28ರಷ್ಟು ಮಾತ್ರ. ಉಳಿದ ಶೇ.72ರಷ್ಟು ಆದಾಯವನ್ನು ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ , ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್ ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ.17 ರಿಂದ ಶೇ.20 ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ.50 ರಷ್ಟು. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇ.20ರಷ್ಟು ಆದಾಯ ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೊಸ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಎಸ್‌ಟಿ ಕೌನ್ಸಿಲ್ ಪರಿಹಾರ ನೀಡಬೇಕು.ರಾಜ್ಯಗಳಿಗೆ ಹೆಚ್ಚಿನ ನಷ್ಟವಾದರೆ ಅಂತಿಮವಾಗಿ ಜನ‌ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ತುಂಬಾ ಮುಖ್ಯವಾದ ವಿಚಾರ. ಪ್ರತಿಯೊಂದು ರಾಜ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸುಸ್ಥಿರ ಆದಾಯ ಅತ್ಯಂತ ಮುಖ್ಯ. ಆದರೆ, ಆದಾಯ ಕೊರತೆ ಉಂಟಾಗಿ ಸ್ವಂತ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತೆ ಎಂಬ ಪದವೇ ಅರ್ಥ ಕಳೆದುಕೊಳ್ಳುತ್ತದೆ. ಸಹಕಾರಿ ಒಕ್ಕೂಟವಾದ ಪದಗಳಲ್ಲಿ ಮಾತ್ರವಲ್ಲದೆ ಕೆಲಸದಲ್ಲೂ ಚಾಲ್ತಿ ಇದ್ದರೆ ಮಾತ್ರ ಸ್ವಾಯತ್ತತೆ ಉಳಿಯಲು ಸಾಧ್ಯ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com