
ಬೆಂಗಳೂರು: ರಾಜ್ಯ ನಾಗರಿಕ ಸೇವೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿಗಾಗಿ ಪರಿಷ್ಕೃತ ಮೀಸಲಾತಿಯನ್ನು ನಿಗದಿಪಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಬುಧವಾರ ಆದೇಶ ಹೊರಡಿಸಿದ್ದು, ಆಗಸ್ಟ್ 25ರ ಸರ್ಕಾರದ ಆದೇಶದ ನಂತರ 101 ಪರಿಶಿಷ್ಟ ಜಾತಿ (SC) ಸಮುದಾಯಗಳಿಗೆ ಆಂತರಿಕ ಮೀಸಲಾತಿಯನ್ನು ಜಾರಿಗೆ ತರಲು ಅವಕಾಶ ಕಲ್ಪಿಸಿಕೊಟ್ಟಿದೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಸರ್ಕಾರದ ನಿರ್ಧಾರಕ್ಕಾಗಿ ಕಾದು ಕುಳಿತಿದ್ದ ಅಧಿಕಾರಿಗಳು, ಒಂದು ವರ್ಷಕ್ಕೂ ಹೆಚ್ಚು ಕಾಲ ನೇಮಕಾತಿಗಳನ್ನು ಸ್ಥಗಿತಗೊಳಿಸಿದ್ದರು. ಇದೀಗ ಈ ಆದೇಶವನ್ನು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಡಿಪಿಎಆರ್ ಆದೇಶವು ರಾಜ್ಯ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿದ್ದ ಅಡೆತಡೆಗಳನ್ನು ದೂರಾಗಿಸಿದೆ. ಆದೇಶದಿಂದ ಸುಮಾರು 2.76 ಲಕ್ಷ ಹುದ್ದೆಗಳ ಭರ್ತಿ ಮಾಡಲು 43 ಇಲಾಖೆಗಳು ಹಂತಹಂತವಾಗಿ ನೇಮಕಾತಿಗಳನ್ನು ಪ್ರಾರಂಭಿಸಲಿದೆ.
ಮೊದಲ ಹಂತದಲ್ಲಿ ಸುಮಾರು 25,000-40,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆರೋಗ್ಯ, ಶಿಕ್ಷಣ ಮತ್ತು ಕಂದಾಯ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಆದೇಶವು ಪರಿಶಿಷ್ಟ ಜಾತಿಗೆ ಶೇ.17, ಎಡಗೈ ಸಮುದಾಯ ಶೇ.6, ಬಲಗೈ ಸಮುದಾಯ ಶೇ.6 ಹಾಗೂ ಭೋವಿ, ಲಂಬಾಣಿ, ಕೊರಚರು, ಕೊರಮರು ಮತ್ತು 59 ಅಲೆಮಾರಿ ಸಮುದಾಯಗಳನ್ನು ಒಳಗೊಂಡಿರುವ ಇತರೆ ಎಸ್ಸಿ ಸಮುದಾಯಕ್ಕೆ ಶೇ.5 ಮೀಸಲಾತಿ ನೀಡಬೇಕೆಂದು ಸ್ಪಷ್ಟಪಡಿಸಿದೆ.
ಈ ಹಿಂದೆ, 101 ಎಸ್‌ಸಿ ಜಾತಿಗಳು ಒಂದು ವರ್ಗದ ಅಡಿಯಲ್ಲಿದ್ದವು. ಕೆಲವು ಜಾತಿಗಳು ಮೀಸಲಾತಿಯ ಪ್ರಯೋಜನಗಳಲ್ಲಿ ಸಿಂಹ ಪಾಲನ್ನು ಹೊಂದಿದ್ದರೂ, ಕೆಲ ಸಮುದಾಗಳ ದಾರಿ ತಪ್ಪಿಸಲಾಗುತ್ತಿತ್ತು. ಹೊಸ ಮೀಸಲಾತಿ ಅಡಿಯಲ್ಲಿ 101 ಉಪಜಾತಿಗಳನ್ನು ಪ್ರವರ್ಗ ಎ,ಬಿ ಮತ್ತು ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ ಮೀಸಲಾತಿ ನೀಡಲಾಗಿದೆ. ಆದರೆ, 'ಅತ್ಯಂತ ಹಿಂದುಳಿದ' ಜಾತಿಗಳನ್ನು ಸಿ ವರ್ಗದಲ್ಲಿ ಇರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಎಸ್‌ಸಿ ಆಂತರಿಕ ಮೀಸಲಾತಿಯನ್ನು ಅಧ್ಯಯನ ನಡೆಸಿದ್ದ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ಆಯೋಗವು, ಎ, ಬಿ, ಸಿ, ಡಿ ಮತ್ತು ಇ ಎಂದು ಐದು ವರ್ಗಗಳನ್ನು ರಚಿಸಿತ್ತು. ಎಸ್‌ಸಿ ಎಡಕ್ಕೆ ಶೇ., ಎಸ್‌ಸಿ ಬಲಕ್ಕೆ ಶೇ.5, ಲಂಬಾಣಿ, ಕೊರಮ, ಕೊರಚ ಮತ್ತು ಭೋವಿಗಳಿಗೆ ಶೇ.4, ಅಲೆಮಾರಿ ಬುಡಕಟ್ಟು ಜನಾಂಗಗಳಿಗೆ ಶೇ.1 ಮತ್ತು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರಕ್ಕೆ ಶೇ.1 ಎಂದು ಪ್ರಸ್ತಾಪಿಸಿತ್ತು, ಆದರೆ, ಸಚಿವ ಸಂಪುಟವು ಸ್ವಲ್ಪ ಬದಲಾದ ಸೂತ್ರವನ್ನು ಅಳವಡಿಸಿಕೊಂಡು ಅವುಗಳನ್ನು - ಎ, ಬಿ ಮತ್ತು ಸಿ ಎಂದು ಮೂರು ವರ್ಗಗಳಾಗಿ ವರ್ಗೀಕರಿಸಿತ್ತು.
ಮೀಸಲಾತಿ ಹಂಚಿಕೆ ಇಂತಿದೆ...
ಪ್ರವರ್ಗಗಳು: ಶೇಕಡವಾರು ಮೀಸಲಾತಿ
ಪ್ರವರ್ಗ-1: 04
ಪ್ರವರ್ಗ-II(ಎ): 15
ಪ್ರವರ್ಗ-II(ಬಿ): 04
ಪ್ರವರ್ಗ-III(ಎ): 04
ಪ್ರವರ್ಗ-III(ಬಿ): 05
ಪರಿಶಿಷ್ಟ ಜಾತಿ ಪ್ರವರ್ಗ ಎ 06
ಪರಿಶಿಷ್ಟ ಜಾತಿ ಪ್ರವರ್ಗ ಬಿ;06
ಪರಿಶಿಷ್ಟ ಜಾತಿ ಪ್ರವರ್ಗ ಸಿ: 05
ಪರಿಶಿಷ್ಟ ಪಂಗಡ: 07
ಸಾಮಾನ್ಯ ಅರ್ಹತೆ: 44
ಒಟ್ಟು: 100
Advertisement