
ಬೆಂಗಳೂರು: ಬೆಂಗಳೂರಿನ ಮಹಿಳಾ ಪೇಯಿಂಗ್ ಗೆಸ್ಟ್(ಪಿಜಿ)ವೊಂದಕ್ಕೆ ನುಗ್ಗಿ 21 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ನಡೆಸಿ, ನಂತರ ಹಣ ದೋಚಿ ಪರಾರಿಯಾಗಿದ್ದ ಗಿಗ್ ಕಾರ್ಮಿಕನನ್ನು ಗುರುವಾರ ಬಂಧಿಸಲಾಗಿದೆ.
ಈ ಆಘಾತಕಾರಿ ಘಟನೆ ಆಗಸ್ಟ್ 29 ರಂದು ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತ ಆರೋಪಿ 30 ವರ್ಷದ ನರೇಶ್ ಪಟ್ಟಮ್, ಬಿಟಿಎಂ ಲೇಔಟ್ 1ನೇ ಹಂತದ ಮಹಿಳಾ ಪಿಜಿಯ ಬಳಿ ಹಾದುಹೋಗುತ್ತಿದ್ದಾಗ, ಯುವತಿಯ ಕೋಣೆಯ ಬಾಗಿಲು ತೆರೆದಿರುವುದನ್ನು ಮತ್ತು ಭದ್ರತಾ ಸಿಬ್ಬಂದಿ ಗಾಢ ನಿದ್ರೆಯಲ್ಲಿ ಇರುವುದನ್ನು ಗಮನಿಸಿದ್ದಾನೆ.
"ನಂತರ ಆರೋಪಿ ಮಾಸ್ಕ್ ಧರಿಸಿ ಪಿಜಿ ಆವರಣವನ್ನು ಪ್ರವೇಶಿಸಿ, ಇತರ ಕೊಠಡಿಗಳನ್ನು ಹೊರಗಿನಿಂದ ಲಾಕ್ ಮಾಡಿ ಸಂತ್ರಸ್ತ ಯುವತಿಯ ಕೋಣೆಯೊಳಗೆ ಹೋಗಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮಹಿಳೆ ತನ್ನ ಕೋಣೆಯಲ್ಲಿ ಮಲಗಿದ್ದಾಗ ಒಳನುಗ್ಗಿದ ವ್ಯಕ್ತಿ ಆಕೆಗೆ ಲೈಂಗಿಕ ಕಿರುಕುಳ ನೀಡಿ, 2,500 ರೂ. ನಗದು ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಮ್ ಆಂಧ್ರಪ್ರದೇಶದ ಮದನಪಳ್ಳಿಯ ನಿವಾಸಿಯಾಗಿದ್ದು, ನಗರದಲ್ಲಿ ಬೈಕ್-ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
2021ರಲ್ಲಿ ತನ್ನ ಊರಿನಲ್ಲಿ ನಡೆದ ಎರಡು ದರೋಡೆ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಬಂದ ನಂತರ ಆರೋಪಿ ಬೆಂಗಳೂರಿಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement