
ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸೋಗಿನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ದೂರವಾಣಿ ಮೂಲಕ ವಂಚಿಸಲು ಯತ್ನಿಸಿದ್ದಾರೆ ಎಂದು ರಾಜಭವನದ ಮೂಲಗಳು ಮಂಗಳವಾರ ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ಶನಿವಾರ (ಸೆ. 6) ಮಧ್ಯಾಹ್ನ ವ್ಯಕ್ತಿಯಿಂದ ಕರೆ ಬಂದಿದೆ.
ಕರೆ ಮಾಡಿದ ವ್ಯಕ್ತಿ ತಾನು ಧರ್ಮೇಂದ್ರ ಪ್ರಧಾನ್ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಯಾವುದೋ ಕೆಲಸಕ್ಕೆ ಸಂಬಂಧಿಸಿದಂತೆ ಸಹಾಯ ಕೋರಿದ್ದಾನೆ.
'ಏನೋ ಸರಿಯಿಲ್ಲ ಎಂಬುದನ್ನು ಗ್ರಹಿಸಿದ ರಾಜ್ಯಪಾಲರು, ಮುಂದಿನ ಕರೆ ಬರುವವರೆಗೆ ಕಾಯಲು ನಿರ್ಧರಿಸಿದರು. ಆದರೆ, ಕರೆ ಬಾರದಿದ್ದಾಗ, ಗೆಹ್ಲೋಟ್ ಕೇಂದ್ರ ಸಚಿವರ ಕಚೇರಿಯನ್ನು ಸಂಪರ್ಕಿಸಿ ಪರಿಶೀಲಿಸಿದ್ದಾರೆ. ಆಗ ಅವರು, ಪ್ರಧಾನ್ ಅವರು ಅಂತಹ ಯಾವುದೇ ಕರೆ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ' ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನಂತರ, ರಾಜ್ಯಪಾಲರು ತಮ್ಮ ವ್ಯಾಪ್ತಿಯ ಪೊಲೀಸ್ ಉಪ ಆಯುಕ್ತರಿಗೆ ಮಾಹಿತಿ ನೀಡಿ, ವಿವರವಾದ ತನಿಖೆಗೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯಲ್ಲಿ ಕರೆ ಕೋಲ್ಕತ್ತಾದಿಂದ ಬಂದಿರಬಹುದು ಎಂದು ತಿಳಿದುಬಂದಿದೆ.
ವಂಚಕನ ಗುರುತನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement