
ಮಂಗಳೂರು: ಕೋಮು ಪ್ರಚೋದನೆ ಆರೋಪದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡುಬಿದಿರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೊ ಬಳಸಿ ಕೋಮು ಪ್ರಚೋದನೆ ಆರೋಪದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಲಾಗಿದೆ.
ಸಿದ್ದರಾಮಯ್ಯ ಅವರ ಫೋಟೊ ಎಡಿಟ್ ಮಾಡಿ ಮುಖ್ಯಮಂತ್ರಿಗಳೇ, "ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿ ಮೇಲೆ ಬುಲ್ಡೋಜರ್ ನುಗ್ಗಿಸಿ " ಎಂಬ ಶೀರ್ಷಿಕೆ ಇದ್ದ ಪೋಸ್ಟರ್ ಅನ್ನು ಮಹೇಶ್ ವಿಕ್ರಮ್ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಈ ಪೋಸ್ಚ್ ಆಧರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂಡಬಿದಿರೆ ಪೊಲೀಸರು ಇದೀಗ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದಾರೆ.
ಮೂಡಬಿದಿರೆ ಪಿಎಸ್ಸೈ ಕೃಷ್ಣಪ್ಪ ಎಂಬವರ ದೂರಿನಡಿ ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಲಾಗಿತ್ತು. ಎರಡು ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಿ ಕೋಮುಗಲಭೆ ಸೃಷ್ಟಿಸುವ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ಈ ಪೋಸ್ಟ್ ನ್ನು ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ನ್ಯಾಯಾಂಗ ಬಂಧನ
ಇದೀಗ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರಿಗೆ ತೆರಳಿದ ಪೊಲೀಸರು ಆರೋಪಿ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ಧರ್ಮಗಳ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಮೂಡಿಸಿ ಕೋಮುಗಲಭೆ ಸೃಷ್ಟಿಸುವಂತಹ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಉದ್ದೇಶದಿಂದ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಎನ್ಎಸ್ 353(2) ಅಡಿ ಸೆ.9ರಂದು ಎಫ್‌ಐಆರ್ ದಾಖಲಿಸಲಾಗಿತ್ತು.
ಬಿಜೆಪಿ ಕಿಡಿ
ಇನ್ನು ಮಹೇಶ್ ವಿಕ್ರಂ ಹೆಗ್ಡೆ ಬಂಧನಕ್ಕೆ ಬಿಜೆಪಿ ನಾಯಕರು ತೀವ್ರ ಕಿಡಿಕಾರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, 'ಧರ್ಮಸೇವೆಗೆ ರಾಷ್ಟ್ರ ಸೇವೆಗೆ ಸಮರ್ಪಿತರಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರ.' ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಕಾರ್ಕಳ, 'ಮದ್ದೂರು ಗಣೇಶೋತ್ಸವ ಸಂದರ್ಭದಲ್ಲಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ ಮತಾಂಧರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೆಂಬ ಕಾರಣಕ್ಕೆ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಪೊಲೀಸರು ಮೂಡಬಿದರೆಯಲ್ಲಿ ಬಂಧಿಸಿದ್ದಾರೆ. ಮುಸ್ಲೀಂ ಓಲೈಕೆಯಲ್ಲಿ ಮುಳುಗಿ ಹೋಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುತ್ವ ಹಾಗೂ ಹಿಂದುಪರ ಧ್ವನಿಗಳನ್ನು ಉಡುಗಿಸುವ ಪ್ರಯತ್ನ ನಡೆಸುತ್ತಿದೆ. ಮಹೇಶ್ ವಿಕ್ರಂ ಹೆಗ್ಡೆಯವರ ಬಂಧನವನ್ನು ಉಗ್ರವಾಗಿ ಖಂಡಿಸುತ್ತೇನೆ. ಹಿಂದುಗಳ ಧಾರ್ಮಿಕ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿರುವ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ಸಂವಿಧಾನ ವಿರೋಧಿ ಪಥದಲ್ಲಿ ಸಾಗುತ್ತಿದೆ' ಎಂದು ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
Advertisement