
ಬೆಂಗಳೂರು: ಟೀ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆಯೊಂದು ತಾರಕಕ್ಕೇರಿ ಬಿಎಂಟಿಸಿ ಬಸ್ ಚಾಲಕನ ತಲೆ ಓಪನ್ ಆಗುವಂತೆ ಬದಿದಾಟವಾಗುವವರೆಗೂ ಸಾಗಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಹೌದು.. ಟೀ ವಿಚಾರಕ್ಕೆ ನಡೆದ ಕ್ಷುಲ್ಲಕ ಗಲಾಟೆ ತಾರಕಕ್ಕೇರಿ ಟೀ ಅಂಗಡಿಯಲ್ಲಿ ಯುವಕ ಬಿಎಂಟಿಸಿ ಚಾಲಕನ ತಲೆಗೆ ಬಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ.
ಇನ್ನು ಈ ವಿಚಾರ ತಿಳಿಯುತ್ತಲೇ ಬಿಎಂಟಿಸಿ ಚಾಲಕನ ಸಹ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಸ್ಖಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ.
ಟೀ ಚೆನ್ನಾಗಿಲ್ಲ ಎಂದಿದ್ದಕ್ಕೇ ಗಲಾಟೆ
ಇನ್ನು ಮೂಲಗಳ ಪ್ರಕಾರ ಬಿಎಂಟಿಸಿ ಚಾಲಕರೊಬ್ಬರು ಟೀ ಕುಡಿಯಲು ಮೆಜೆಸ್ಟಿಕ್ ನಿಲ್ದಾಣದೊಳಗಿರುವ ಗೂಡಂಗಡಿಗೆ ಬಂದಿದ್ದರು. ಈ ವೇಳೆ ಯುವಕನಿಂದ ಟೀ ಪಡೆದು ಕುಡಿದ ಚಾಲಕ ಟೀ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಯುವಕ ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದು ಈ ವೇಳೆ ಚಾಲಕ ಮತ್ತು ಟೀ ಅಂಗಡಿ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಟೀ ಅಂಗಡಿ ಯುವಕ ಏಕಾಏಕಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಟೀ ಫ್ಲಾಸ್ಕ್ ನಿಂದ ಚಾಲಕನ ತಲೆಗೆ ಬಾರಿಸಿದ್ದು, ಈ ವೇಳೆ ಚಾಲಕನ ತಲೆಯಿಂದ ರಕ್ತಸ್ರಾವವಾಗಿದೆ.
ಇದೇ ಸಂದರ್ಭದಲ್ಲಿ ಅಲ್ಲಿದ್ದ ಸಾರಿಗೆ ಇಲಾಖೆಯ ಇತರೆ ಚಾಲಕರು ಹಾಗೂ ನಿರ್ವಾಹಕರು ಟೀ ಅಂಗಡಿ ಯುವಕನ ವಿರುದ್ಧ ಜಗಳಕ್ಕೆ ನಿಂತಿದ್ದಾರೆ. ಅಲ್ಲದೆ ಕೆಲ ಸಿಬ್ಬಂದಿ ಕೈಗೆ ಸಿಕ್ಕ ವಸ್ತುಗಳಿಂದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರನ್ನು ಬಿಡಿಸಲಾಗಿದೆ.
ಬಳಿಕ ಗಾಯಗೊಂಡಿದ್ದ ಚಾಲಕನನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
Advertisement