
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸರಗಳ್ಳರ ಕೈಚಳಕ ಮತ್ತೆ ಶುರುವಾಗಿದೆ. ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಇಬ್ಬರು ದುಷ್ಕರ್ಮಿಗಳು ಮಚ್ಚು ಬೀಸಿ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಶನಿವಾರ ರಾತ್ರಿ ಗಿರಿನಗರದಲ್ಲಿ ಇಬ್ಬರು ಮತ್ತು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮಹಿಳೆಯರಿಂದ ಸುಮಾರು 75 ಗ್ರಾಂ ಚಿನ್ನವನ್ನು ಆರೋಪಿಗಳು ದೋಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಯತ್ನವೊಂದು ವಿಫಲವಾಗಿದೆ.
ಗಿರಿನಗರದಲ್ಲಿ ನಡೆದ ಘಟನೆಯಲ್ಲಿ ಹೊಸಕೆರೆಹಳ್ಳಿ ಸಮೀಪ ಋಷಿಕೇಶ ನಗರದ ಉಷಾ ಹಾಗೂ ವರಲಕ್ಷ್ಮಿ ಎಂಬುವವರ ಮೇಲೆ ದುಷ್ಕರ್ಮಗಳು ಮಚ್ಚಿನಿಂದ ದಾಳಿ ನಡೆಸಿದ್ದು, ಪರಿಣಾಮ ಘಟನೆಯಲ್ಲಿ ವರಲಕ್ಷ್ಮೀ ಅವರ ಕೈ ಬೆರಳು ತುಂಡಾಗಿದೆ ಎಂದು ತಿಳಿದುಬಂದಿದೆ.
ಮನೆ ಸಮೀಪದ ಗಣೇಶೋತ್ಸವದ ನಿಮಿತ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ 9 ಗಂಟೆಯಲ್ಲಿ ವರಲಕ್ಷ್ಮಿ ಹಾಗೂ ಉಷಾ ಮನೆಗೆ ಮರಳುತ್ತಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದ ಮುಖ ಮುಚ್ಚುವಂತಹ ಹೆಲೈಟ್ ಧರಿಸಿದ್ದ ದುಷ್ಕರ್ಮಿಗಳು, ಉಷಾ ಅವರ ಕುತ್ತಿಗೆಯಲ್ಲಿದ್ದ ಸರ ಕಿತ್ತು ಬಳಿಕ ವರಲಕ್ಷ್ಮೀ ಅವರ ಕುತ್ತಿಗೆಗೆ ಕೈ ಹಾಕಿದ್ದಾರೆ. ಆಗ ಪ್ರತಿರೋಧ ತೋರಿದಾಗ ಇಬ್ಬರೂ ಮಹಿಳೆಯರ ಮೇಲೆ ದುಷ್ಕರ್ಮಿಗಳು ಮಚ್ಚು ಬೀಸಿದ್ದಾರೆ.
ಈ ಹಂತದಲ್ಲಿ ವರಲಕ್ಷ್ಮೀ ಅವರ ಕೈಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಅವರ ಕೈ ಬೆರಳು ತುಂಡಾಗಿದೆ. ಆರೋಪಿಗಳು ಕುತ್ತಿಗೆಯಲ್ಲಿದ್ದ ಸರಗಳನ್ನು ಕಿತ್ತು ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೋಣನಕುಂಟೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯೊಬ್ಬರಿಂದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದಿರುವುದು ವರದಿಯಾಗಿದೆ.
Advertisement