
ಬೆಂಗಳೂರು: ಹದಗೆಟ್ಟ ರಸ್ತೆಗಳು ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್‌ಲೈನ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ ಬೆಂಗಳೂರಿನ ಹೊರ ವರ್ತುಲ ರಸ್ತೆಯ(ಒಆರ್‌ಆರ್) ಬೆಳ್ಳಂದೂರಿನಲ್ಲಿರುವ ತನ್ನ ಪ್ರಸ್ತುತ ಕಚೇರಿಯನ್ನು ಸ್ಥಳಾಂತರಿಸುವುದಾಗಿ ಹೇಳಿದ ನಂತರ ಬೆಂಗಳೂರಿನ ಕೆಲವು ಉದ್ಯಮಿಗಳು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಒಆರ್‌ಆರ್ ಆಗಾಗ್ಗೆ ಸಂಚಾರ ದಟ್ಟಣೆಗೆ ಸಾಕ್ಷಿಯಾಗುತ್ತದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು, ಇದು ಬೆಂಗಳೂರಿನ ಆಡಳಿತದ "ದೊಡ್ಡ ವೈಫಲ್ಯ" ಎಂದು ಟೀಕಿಸಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತ ಮಹೇಶ್ವರ ರಾವ್ ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ.
"ಸಚಿವ ಡಿ ಕೆ ಶಿವಕುಮಾರ್ ಅವರೇ ದಯವಿಟ್ಟು ಗಮನಿಸಿ, ಕಂಪನಿಗಳು ಒಆರ್‌ಆರ್‌ನಿಂದ ಹೊರಹೋಗುತ್ತಿವೆ. ಪರಿಸ್ಥಿತಿ ಆಶಾದಾಯಕವಾಗಿಲ್ಲ. ದಯವಿಟ್ಟು ಮಧ್ಯಪ್ರವೇಶಿಸಿ" ಎಂದು ಮೋಹನ್‌ದಾಸ್ ಪೈ ಮಂಗಳವಾರ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಸಹ, ಡಿಕೆ ಶಿವಕುಮಾರ್ ಅವರು ಈ ಸಮಸ್ಯೆಗಳನ್ನು ಸರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
"ಇದು ಸಮಸ್ಯೆ ಗಂಭೀರವಾಗಿದೆ. ಈ ಸಮಸ್ಯೆಗಳನ್ನು ಸರಿಪಡಿಸಲು ತುರ್ತು ಕ್ರಮಗಳ ಅಗತ್ಯವಿದೆ" ಎಂದು ಶಾ ಅವರು, ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಅವರು, ORR ನಲ್ಲಿರುವ ಕಂಪನಿಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದು ಹೇಳಿದ್ದಾರೆ.
'ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
Advertisement