
ಬೆಂಗಳೂರು: ಹದಗೆಟ್ಟಿರುವ ರಸ್ತೆಗಳ ಪರಿಸ್ಥಿತಿ ಮತ್ತು ದೀರ್ಘ ಪ್ರಯಾಣದ ಸಮಯವನ್ನು ಉಲ್ಲೇಖಿಸಿ, ನಗರದ ಹೊರ ವರ್ತುಲ ರಸ್ತೆ (ORR) ಪ್ರದೇಶದಿಂದ ತನ್ನ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಬ್ಲ್ಯಾಕ್‌ಬಕ್ ತಿಳಿಸಿದೆ.
ಕಳೆದ ಒಂಬತ್ತು ವರ್ಷಗಳಿಂದ ಔಟರ್ ರಿಂಗ್ ರೋಡ್‌ನಲ್ಲಿ ಬೆಳ್ಳಂದೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯು, ಹದಗೆಟ್ಟಿರುವ ರಸ್ತೆ ಮೂಲಸೌಕರ್ಯ ಉದ್ಯೋಗಿಗಳಿಗೆ ಕೆಲಸ ಮಾಡುವುದನ್ನು ಹೆಚ್ಚು ಕಷ್ಟಕರವಾಗಿಸಿದೆ ಎಂದು ಹೇಳಿದೆ.
ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ, ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, 'ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ' ಎಂದು ಹೇಳಿದ್ದಾರೆ.
ಉದ್ಯೋಗಿಗಳಿಗೆ ಸರಾಸರಿ ಏಕಮುಖ ಪ್ರಯಾಣವು 1.5 ಗಂಟೆಗಳಿಗೂ ಹೆಚ್ಚಾಗಿದ್ದು, ಉತ್ಪಾದಕತೆ ಮತ್ತು ಕೆಲಸ-ಜೀವನದ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಪ್ರದೇಶದ ನಾಗರಿಕರು ಮತ್ತು ವ್ಯವಹಾರಗಳು ಪದೇ ಪದೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, 'ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿವೆ. ಅವುಗಳನ್ನು ಸರಿಪಡಿಸುವ ಉದ್ದೇಶ ಕಾಣಿಸುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿಯೂ ಇದರಲ್ಲಿ ಯಾವುದೇ ಬದಲಾವಣೆ ಕಾಣುವ ಸಾಧ್ಯತೆ ಇಲ್ಲ. ಇದರಿಂದಾಗಿ ಬ್ಲ್ಯಾಕ್‌ಬಕ್ ಕಾರ್ಯಾಚರಣೆ ಸ್ಥಳವನ್ನು ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು' ಎಂದು ಯಬಾಜಿ ಹೇಳಿದರು.
ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಹೆಚ್ಚುತ್ತಿರುವ ಹತಾಶೆಯನ್ನು ಈ ಬೆಳವಣಿಗೆ ಮತ್ತೊಮ್ಮೆ ಎತ್ತಿ ತೋರಿಸುತ್ತದೆ.
ಹಲವಾರು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಮತ್ತು ನವೋದ್ಯಮಗಳಿಗೆ ನೆಲೆಯಾಗಿರುವ ಹೊರ ವರ್ತುಲ ರಸ್ತೆಯು ಸಂಚಾರ ದಟ್ಟಣೆ, ಕಳಪೆ ರಸ್ತೆ ಗುಣಮಟ್ಟ ಮತ್ತು ಸಕಾಲಿಕ ನಾಗರಿಕ ನಿರ್ವಹಣೆಯ ಕೊರತೆಯಿಂದ ದೀರ್ಘಕಾಲದಿಂದ ಬಳಲುತ್ತಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿನ್ನೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತ್ತಾ, ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ನಗರ ಆಯುಕ್ತರು ನಿಯಮಿತವಾಗಿ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆಎಂದು ಹೇಳಿದ್ದರು.
'ನಾವು ತಲುಪಿಸಬೇಕು, ಪ್ರತಿಯೊಬ್ಬ ನಾಗರಿಕರಿಗೂ ಸಹಾಯವಾಗುವಂತೆ ನೋಡಿಕೊಳ್ಳಬೇಕು. ಬೆಂಗಳೂರು ನಗರದ ಎಲ್ಲ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಪರಿಹರಿಸಲು ಆಗುವುದಿಲ್ಲ. ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನಮ್ಮ ನಾಗರಿಕರು ಸಹ ಸಹಕರಿಸಬೇಕು. ಅವರು ತಮ್ಮ ಆಸ್ತಿಗಳನ್ನು ಘೋಷಿಸಬೇಕು. ಅವರು ಏನನ್ನೂ ಮರೆಮಾಡಬಾರದು. ಅವರು ನಿಯಮಿತವಾಗಿ ತೆರಿಗೆ ಪಾವತಿಸಬೇಕು ಮತ್ತು ಅವರಿಗೆ ಉತ್ತಮ ಆಡಳಿತ ಸಿಗುತ್ತದೆ' ಎಂದು ಅವರು ಹೇಳಿದ್ದರು.
Advertisement