
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಾಗ ಮತ್ತು ರಸ್ತೆಗಳನ್ನು ದುರಸ್ತಿ ಮಾಡುವಾಗ ಗುಣಮಟ್ಟದ ಕೆಲಸವನ್ನು ಖಚಿತಪಡಿಸಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಐದು ಪಾಲಿಕೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಉನ್ನತ ಮಟ್ಟದ ಸಭೆಯ ನಂತರ ಡಿಕೆ.ಶಿವಕುಮಾರ್ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ರಸ್ತೆ ಗುಂಡಿಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಯಾವುದೇ ವಿಳಂಬವಿಲ್ಲದೆ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುಣಮಟ್ಟದ ಕೆಲಸವನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಕೆಲಸ ಮುಗಿದ ನಂತರವೇ ಬಿಲ್‌ಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕಳಪೆ ನಾಗರಿಕ ಕಾಮಗಾರಿಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದ ಡಿಕೆ.ಶಿವಕುಮಾರ್ ಅವರು, ಐದು ಪಾಲಿಕೆ ಆಯುಕ್ತರು ನಿಯಮಿತವಾಗಿ ತಪಾಸಣೆ ನಡೆಸುವಂತೆ ಹಾಗೂ ನಗರವನ್ನು ಸ್ವಚ್ಛವಾಗಿಡುವತ್ತ ಗಮನ ಹರಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಅಧಿಕಾರಿಗಳು, ಐದು ಪಾಲಿಕೆಗಳ ಆಯುಕ್ತರು, ಬೆಂಗಳೂರು ನಗರ ಉಪ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಮತ್ತು ಬಿಡಬ್ಲ್ಯೂಎಸ್ಎಸ್ಬಿ, ಬಿಡಿಎ ಮತ್ತು ಇತರ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು
Advertisement