
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರಗಳ ಬಳಸಲು ಅನುವು ಮಾಡುವ ನಿಯಮ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಗೊಂದಲ ಉಂಟಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಸಲು ಕಾಂಗ್ರೆಸ್ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ನಿಯಮ ತಿದ್ದುಪಡಿಗೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕು ಪ್ರತ್ಯೇಕ ಕರಡು ವಿಧೇಯಕವನ್ನು ರೂಪಿಸಿದೆ. ನಾಲ್ಕು ಕಾಯ್ದೆಗಳಿಗೆ ತಿದ್ದುಪಡಿ ತಂದರೆ ಮಾತ್ರ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಆದೇಶ ನೀಡಲು ಸಾಧ್ಯವಾಗಲಿದೆ.
ಈ ಮಧ್ಯೆ ಸುಗ್ರೀವಾಜ್ಞೆ ತರಲು ಸರ್ಕಾರ ಮುಂದಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಿದೆ. ಆದರೆ, ಸುಗ್ರೀವಾಜ್ಞೆ ಅಗತ್ಯತೆಯ ಬಗ್ಗೆ ಗೊಂದಲಗಳು ಶುರುವಾಗಿದೆ ಎಂದು ತಿಳಿದುಬಂದಿದೆ.
ಗುರುವಾರ ಸಚಿವ ಸಂಪುಟ ಸಭೆ ನಡೆಸಿದ್ದು, ಸಭೆಯಲ್ಲಿ ಸುಗ್ರೀವಾಜ್ಞೆ ವಿಚಾರವಾಗಿ ಸರ್ಕಾರ ಚರ್ಚೆ ನಡೆಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ವಿಚಾರವಾಗಿ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆಯೋ, ಇಲ್ಲವೋ ಎಂಬ ಅಭಿಪ್ರಾಯ ತಿಳಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಪತ್ರದ ಮೂಲಕ ಚುನಾವಣೆ ನಡೆಸುವ ಕುರಿತು ಕಾನೂನು ತಿದ್ದುಪಡಿ ಕುರಿತು ಗೊಂದಲವಿದೆ. ಹೀಗಾಗಿ ಕಾನೂನು ತಿದ್ದುಪಡಿ ಅವಶ್ಯಕತೆ ಇದೆಯೇ, ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು ಅಧ್ಯಯನ ನಡೆಸಿ ತಿಳಿಸುವಂತೆ ಹೇಳಲಾಗಿದೆ ಎಂದು ತಿಳಿಸಿದರು.
ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಬಹುದು. "ಹೊಸ ಸುಗ್ರೀವಾಜ್ಞೆಯ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ. ಒಂದು ಅಥವಾ ಎರಡು ದಿನಗಳಲ್ಲಿ ಸರ್ಕಾರದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಅವಶ್ಯಕತೆ ಇದ್ದರೆ ಮಾತ್ರ ಸುಗ್ರೀವಾಜ್ಞೆಯನ್ನೂ ಹೊರಡಿಸುತ್ತೇವೆ ಎಂದರು.
ಬಿಪಿಎಲ್ ಪಡಿತರ ಚೀಟಿ ರದ್ದು ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಪಿಎಲ್ ಪಡಿತರ ಚೀಟಿ ಕುರಿತಂತೆ ಸಮಸ್ಯೆಗಳಿದ್ದರೆ ಅದರ ಪರಿಹಾರಕ್ಕೆ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಸಮಿತಿಯನ್ನು ಸಂಪರ್ಕಿಸಬೇಕು. ಅಂತಹ ಸಮಸ್ಯೆಗಳನ್ನು ಸಮಿತಿ ನಿಭಾಯಿಸಲಿದೆ. ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಮಾಡಿದ್ದು, ಅವರಿಗೆ ಸಮಸ್ಯೆಯಾಗದಂತೆ ಮಾಡುತ್ತೇವೆ. ಇನ್ನು, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಕಾಳಜಿವಹಿಸಿ ಈ ಕುರಿತು ಕೆಲಸ ಮಾಡಬೇಕು ಎಂದರು.
Advertisement