
ಬೆಂಗಳೂರು: ಗುರುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಸಂಚಾರ ದಟ್ಟಣೆ ಉಂಟಾಗಿ, ಜನರು ಪರದಾಡುವಂತಾಯಿತು. ನಿನ್ನೆ ಸಂಜೆಯಿಂದ ಆರಂಭವಾದ ಮಳೆ, ರಾತ್ರಿಯಿಡೀ ಸುರಿದಿದ್ದು, ಬೆಳಗ್ಗೆ ಸ್ವಲ್ಪ ಬಿಡುವು ನೀಡಿದೆ.
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಮುಂಜಾನೆ 5.30 ರವರೆಗೆ ಕ 65.5 ಮಿಮೀ ಮಳೆ ದಾಖಲಾಗಿದೆ. ನಗರದ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) 66 ಮಿಮೀ ಮಳೆಯಾಗಿರುವುದಾಗಿ ವರದಿ ಮಾಡಿದೆ. ದೊಡ್ಡಬಳ್ಳಾಪುರದಲ್ಲಿ 60 ಮಿ.ಮೀ, ರಾಮನಗರದ ಚಂದೂರಾಯನಹಳ್ಳಿಯಲ್ಲಿ 46 ಮಿ.ಮೀ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟದಲ್ಲಿ 43 ಮಿ.ಮೀ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಯೆಲ್ಲೂ ಆಲರ್ಟ್ ನೀಡಿದೆ. ಅಲ್ಲಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ವಿಜಯಪುರ, ಬೀದರ್, ಕಲಬುರಗಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ. ಕರ್ನಾಟಕದಾದ್ಯಂತ ಗಮನಾರ್ಹ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕನಗಮಕಲಪಲ್ಲಿಯಲ್ಲಿ 130 ಮಿಮೀ, ತಿರುಮಣಿ (114 ಮಿಮೀ), ಬೀಚಗಾನಹಳ್ಳಿ (114 ಮಿಮೀ), ಚೇಳೂರು (101 ಮಿಮೀ), ಮತ್ತು ಬೀದರ್ ಜಿಲ್ಲೆಯ ಭಂಡಾರಕುಂಠ (112 ಮಿ ಮೀ) ಮಳೆ ದಾಖಲಾಗಿದೆ.
ಗದಗದಲ್ಲಿ 51.9 ಮಿ.ಮೀ, ರಾಮನಗರದ ಚಂದೂರಾಯನಹಳ್ಳಿಯಲ್ಲಿ 46 ಮಿ.ಮೀ, ಕೋಲಾರದ ಟಮಕದಲ್ಲಿ 21.5 ಮಿ.ಮೀ, ಮಂಗಳೂರಿನಲ್ಲಿ 20.7 ಮಿ.ಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಿದ್ಯುತ್ ಕಡಿತ, ನೀರು ಪೂರೈಕೆ ಸ್ಥಗಿತ ಮತ್ತು ದುರ್ಬಲವಾದ ಮರದ ಕೊಂಬೆ ಬೀಳಬಹುದು ಎಂದು IMD ಎಚ್ಚರಿಸಿದೆ.
ಮುನ್ನೆಚ್ಚರಿಕೆ ಕ್ರಮಗಳು: ಮರಗಳ ಕೆಳಗೆ ನಿಲ್ಲಬೇಡಿ, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಆನ್ ಮಾಡಬೇಡಿ. ಕೆರೆ ಮತ್ತಿತರ ಪ್ರದೇಶಗಳಿಗೆ ತೆರಳಬೇಡಿ, ವಿದ್ಯುತ್ ಚಾಲಿತ ಕೆಲಸಗಳನ್ನು ಆದಷ್ಟು ತಡೆಗಟ್ಟಿ. ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ ಎಂದು IMD ಸಲಹೆ ಹೇಳಿದೆ.
Advertisement