
ಬೆಂಗಳೂರು: ಪಣತ್ತೂರು ರಸ್ತೆಯ ಹಳ್ಳಕ್ಕೆ ಶಾಲಾ ಬಸ್ ಸ್ಕಿಡ್ ಆದ ನಂತರ ಮಹದೇವಪುರ ವಿಧಾನಸಭೆಯ ನಿವಾಸಿಗಳು ಕಳೆದ ಶನಿವಾರ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಹೊರ ವರ್ತುಲ ರಸ್ತೆ (ORR) ನಿಂದ ಪಣತ್ತೂರು ಗ್ರಾಮದವರೆಗಿನ 1.3 ಕಿ.ಮೀ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ.
ಬೆಂಗಳೂರು ಪೂರ್ವ ನಗರ ನಿಗಮ (BECC) ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಚೌಗುಲೆ ಅವರ ಪ್ರಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕೆಲಸಕ್ಕಾಗಿ ರಸ್ತೆಗಳನ್ನು ಅಗೆಯಲಾಗಿದ್ದು ನಂತರ ಅವುಗಳನ್ನು ಭರ್ತಿ ಮಾಡಿರಲಿಲ್ಲ. ಪ್ರಸ್ತುತ ಈ ರಸ್ತೆ ಕೇವಲ 20 ಅಡಿಗಳಷ್ಟಿದ್ದು ಅದನ್ನು 40 ಅಡಿಗಳಿಗೆ ವಿಸ್ತರಿಸಲಾಗುತ್ತಿದೆ. ಆದರೆ 480 ಮೀಟರ್ ವ್ಯಾಪ್ತಿಯ ಕಾಮಗಾರಿ ಭೂಸ್ವಾಧೀನದಿಂದಾಗಿ ಸವಾಲಾಗಿ ಪರಿಣಮಿಸಿದೆ ಎಂದರು.
ಈ ಪ್ರದೇಶದಲ್ಲಿ 55 ಆಸ್ತಿಗಳನ್ನು ಮುಕ್ತ ಪ್ರಯಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕಾಗಿತ್ತು. 5 ಸರ್ಕಾರಿ ಆಸ್ತಿಗಳಾಗಿದ್ದು, ಅದು ಸಮಸ್ಯೆಯಾಗಿರಲಿಲ್ಲ, 50ರಲ್ಲಿ 42 ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ 8 ಆಸ್ತಿಗಳಲ್ಲಿ ನಾಲ್ಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪ್ರದೇಶದ ರಸ್ತೆ ವಿಸ್ತರಣೆಗಾಗಿ ಸುಮಾರು 90 ಪ್ರತಿಶತ ಭೂಸ್ವಾಧೀನ ಪೂರ್ಣಗೊಂಡಿದೆ. ಶನಿವಾರ ನಾಲ್ಕು ರೈತರನ್ನು ಚರ್ಚೆಗೆ ಆಹ್ವಾನಿಸಲಾಗಿದ್ದು ಯೋಜನೆಗಾಗಿ ಭೂಮಿಯ ಒಂದು ಭಾಗವನ್ನು ಬಿಟ್ಟುಕೊಡಲು ಮನವರಿಕೆ ಮಾಡಲಾಗಿದೆ ಎಂದರು.
ಉಳಿದ ನಾಲ್ಕು ಆಸ್ತಿಗಳ ಭೂಸ್ವಾಧೀನ ಪೂರ್ಣಗೊಂಡ ನಂತರ, ಮುಂದಿನ ಎರಡು ವಾರಗಳಲ್ಲಿ ORR-ಪಣತ್ತೂರು ಗ್ರಾಮ ರಸ್ತೆಯಲ್ಲಿರುವ S ಕ್ರಾಸ್ ಪ್ರದೇಶದ 480 ಮೀಟರ್ ಕಾಂಕ್ರೀಟ್ ಮಾಡಲಾಗುವುದು. S ಕ್ರಾಸ್‌ನ ಒಂದು ಭಾಗವನ್ನು ಶನಿವಾರ ಕಾಂಕ್ರೀಟ್ ಮಾಡಲಾಗಿದೆ. ಅಕ್ಟೋಬರ್ 15ರ ವೇಳೆಗೆ 1.8 ಕಿ.ಮೀ. ಉದ್ದದ ಸಂಪೂರ್ಣ ORR-ಪಣತ್ತೂರು ರಸ್ತೆಯ ಮಾರ್ಗವು ಉತ್ತಮ ಸ್ಥಿತಿಯಲ್ಲಿರುತ್ತದೆ. ಚರಂಡಿ ವ್ಯವಸ್ಥೆಯನ್ನೂ ಸಹ ಹೊಂದಿರುತ್ತದೆ ಎಂದು ಉದಯ್ ಚೌಗುಲೆ ಹೇಳಿದರು.
ಶನಿವಾರ ಆಸ್ತಿ ಮಾಲೀಕರೊಂದಿಗಿನ ಸಭೆಯ ನಂತರ, ಶನಿವಾರ ಸಂಜೆ ಎಸ್ ಕ್ರಾಸ್ ಪ್ರದೇಶದಲ್ಲಿ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಬಿಇಸಿಸಿ ಆಯುಕ್ತ ಡಿ.ಎಸ್. ರಮೇಶ್, ಜಂಟಿ ಆಯುಕ್ತೆ ಕೆ. ದಾಕ್ಷಾಯಿಣಿ ಅವರು ಕೆಲಸವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ 1.3 ಮೀಟರ್ ಉದ್ದದ ಗುಂಡಿಗಳನ್ನು ಮುಚ್ಚಲು ಸಾಕಷ್ಟು ಅಗ್ರಿಗೇಟರ್‌ಗಳನ್ನು ಬಳಸಲಾಗಿದೆ. ನಮ್ಮ ಎಂಜಿನಿಯರ್‌ಗಳು ರಸ್ತೆ ಸಮಸ್ಯೆಗಳನ್ನು ಸರಿಪಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಬೆಂಗಳೂರು ಪೂರ್ವ ನಗರ ನಿಗಮದ ಜಂಟಿ ಆಯುಕ್ತೆ ಕೆ. ದಾಕ್ಷಾಯಿಣಿ ಹೇಳಿದರು.
Advertisement