
ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಹಿಂದಿನ ಸರ್ಕಾರ ರಸ್ತೆಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ರಸ್ತೆಗಳ ನಿರ್ವಹಣೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜವಾಬ್ದಾರಿಯಾಗಿದೆ. ಗುಂಡಿಗಳನ್ನು ಮುಚ್ಚುವುದು ನಿಯಮಿತ ಪ್ರಕ್ರಿಯೆಯಾಗಿದ್ದು, ಆಡಳಿತ ಸರ್ಕಾರದ ಮೇಲೆ ಆರೋಪ ಹೊರಿಸಲಾಗುತ್ತಿದೆ.
ನಗರದಲ್ಲಿ ಗುಂಡಿಗಳು ಇಲ್ಲ ಎಂದು ನಾನು ಹೇಳುವುದಿಲ್ಲ. ಮಳೆಗಾಲದಲ್ಲಿ ಸಹಜವಾಗಿ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತವೆ. ಆದರೆ. ಅದನ್ನು ಸರಿಪಡಿಸುವ ಜವಾಬ್ದಾರಿ ಪಾಲಿಕೆ ಮತ್ತು ಸರ್ಕಾರದ್ದೇ ಆಗಿರುತ್ತದೆ. ಬಿಜೆಪಿ ಆಡಳಿತಾವಧಿಯಲ್ಲೇ ಲಕ್ಷಗಟ್ಟಲೆ ಗುಂಡಿಗಳು ನಗರದಲ್ಲಿ ಕಂಡುಬಂದಿದ್ದವು. ಈ ಹಿಂದೆ ಗುಂಡಿಗಳಿಂದ 17 ಜನ ಸಾವನ್ನಪ್ಪಿದ್ದರು. ಆಗ ನಾವೇ ಟೀಕೆ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿಗಳು ಇತ್ತು. ಆಗ ಆಯುಕ್ತರು ತುಷಾರ್ ಗಿರಿನಾಥ್ ಇದ್ದರು. ಅವರನ್ನು ಪ್ರತಿನಿತ್ಯ ಯಾವಾಗ ಎಷ್ಟು ಗುಂಡಿ ಮುಚ್ಚುತ್ತಿರಾ ಎಂದು ಕೇಳಲಾಗುತ್ತಿತ್ತು,
ಬಿಜೆಪಿ ಅವಧಿಯಲ್ಲಿ 6116 ಕೋಟಿ ಅನುದಾನ ಕೊಡಲಾಗಿತ್ತು. ಅವರು ರಸ್ತೆಗಳಿಗೆ 3346 ಕೋಟಿಗಳನ್ನು ತೆಗೆದುಕೊಂಡಿದ್ರು.ಅಂದು ನಮ್ಮ ಶಾಸಕರಿಗೆ 682 ಕೋಟಿ ಕೊಟ್ಟಿದ್ದರು. ಅವರು ಅಷ್ಟೊಂದು ಹಣ ತೆಗೆದುಕೊಂಡಿದ್ದರೂ ಗುಂಡಿಗಳು ಯಾಕೆ ಬಿತ್ತು? ನಮ್ಮ ಸರ್ಕಾರ ಗುಂಡಿಗಳನ್ನು ಮುಚ್ಚಲು ಎಲ್ಲ ಪ್ರಯತ್ನ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುಂಡಿಗಳು ಬೀಳೋದಕ್ಕೆ ಬಿಜೆಪಿ ನಾಯಕರೇ ಕಾರಣ. ಈಗ ರಸ್ತೆ ಗುಂಡಿಗಳು ಬಿದ್ದಿವೆ ಅದನ್ನು ಮುಚ್ಚೋ ಕೆಲಸ ಮಾಡುತ್ತೇವೆ. ಗುಂಡಿ ಮುಕ್ತ ಅಂತಹ ಯಾವತ್ತು ಸಾಧ್ಯವಿಲ್ಲ. ರಸ್ತೆ ಕೆಲಸ ಕಾರ್ಯಗಳು ನಡೆಯುತ್ತಲೇ ಆಗ್ತಿರುತ್ತವೆ. 3 ವರ್ಷ ಮೈಂಟೈನಿಂಗ್ ಪೀರಿಯಡ್ ಇರುತ್ತದೆ. ಅವರು ಆ ರಸ್ತೆಯ ಗುಣಮಟ್ಟ ನೋಡಿಕೊಳ್ಳುತ್ತಾರೆ. ಆ ನಡುವೆ ಸಣ್ಣಪುಟ್ಟ ಕೆಲಸಗಳು ಆಗಿರುತ್ತವೆ. ಸಿಎಂ ಡಿಸಿಎಂ ಹೇಳಿದ್ದಾರೆ ಆ ವಾರ್ಡ್ನ ಜವಾಬ್ದಾರಿ ಇಂಜಿನಿಯರಿಗೆ ಆಯುಕ್ತರಿಗೆ ಕೊಟ್ಡಿದ್ದಾರೆ. ಯಾರು ಕೆಲಸ ಮಾಡಿರೋದಿಲ್ಲ ಅಂತಹ ಮೇಲೆ ಕ್ರಮ ಆಗಲಿದೆ.
ಬಿಜೆಪಿ ಅವರು ಅಧಿಕಾರ ಬಿಟ್ಟು ಹೋದಾಗ 8 ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ತೀರಿಸಬೇಕೋ ಬೇಡವೋ..? ಕ್ಯಾಂಟ್ರಕ್ಟರ್ ಅವರನ್ನ ಇಂತಹವರೇ ಕೊಡಿ ಅಂತಾ ಹೇಳಲು ಆಗಲ್ಲ. ನಾನು ಜಯನಗರ ಕ್ಷೇತ್ರಕ್ಕೆ ಬಂದಾಗ ಒಂದೇ ಒಂದು ಗುಂಡಿ ಇರಲಿಲ್ಲ. ಬಿಜೆಪಿ ಅವರ ಆರೋಪಕ್ಕೆ ನಾವು ಉತ್ತರ ನೀಡಲೇಬೇಕು. ಅವರ ಟೀಕೆಗೆ ಉತ್ತರ ನೀಡಲಿಲ್ಲ ಅಂದ್ರೆ ಅವರು ಹೇಳಿದ್ದೇ ನಿಜ ಅಂದುಕೊಳ್ಳುತ್ತಾರೆಂದು ಹೇಳಿದರು.
ಇದೇ ವೇಳೆ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯಗಳನ್ನು ಮುಕ್ತಗೊಳಿಸುವಂತೆ ರಾಜ್ಯಪಾಲರಿಗೆ ವಿಎಚ್‌ಪಿ ಸಲ್ಲಿಸಿರುವ ಮನವಿ ಪತ್ರ ಕುರಿತು ಪ್ರತಿಕ್ರಿಯೆ ನೀಡಿ, ಹಿಂದೂ ದೇವಾಲಯವನ್ನು ರಾಜ್ಯ ಸರ್ಕಾರದ ಅಧೀನಕ್ಕೆ ತರಬಾರದು ಎಂಬ ಕಾನೂನು ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ದೇಶದ ಎಲ್ಲೆಡೆ ಅನ್ವಯವಾಗುವಂತೆ ಏಕರೂಪದ ಕಾಯ್ದೆ ರೂಪಿಸಬೇಕು. ವಿಶ್ವ ಹಿಂದೂ ಪರಿಷತ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.
ಧರ್ಮಸ್ಥಳ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಯಾರೂ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement