

ಬೆಂಗಳೂರು: ಡಾ. ಮನ್ಮೋಹನ್ ಸಿಂಗ್ ಬೆಂಗಳೂರು ಸಿಟಿ ವಿಶ್ವವಿದ್ಯಾಲಯವು ಏಪ್ರಿಲ್ 4ರಂದು ತನ್ನ ಐದನೇ ವಾರ್ಷಿಕ ಘಟಿಕೋತ್ಸವವನ್ನು ಆಯೋಜಿಸುತ್ತಿದ್ದು, ಈ ವರ್ಷವೂ ವಿದ್ಯಾರ್ಥಿಗಳು, ಕುಲಪತಿ, ಉನ್ನತ ಶಿಕ್ಷಣ ಸಚಿವರು, ಸಿಂಡಿಕೇಟ್ ಸದಸ್ಯರು ಮತ್ತು ಆಡಳಿತ ಸಿಬ್ಬಂದಿಗೆ ಹಿಂದಿನ ವಸ್ತ್ರ ಸಂಹಿತೆಯನ್ನೇ ಅನಸುರಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಬಿಸಿಯು ಉಪಕುಲಪತಿ ರಮೇಶ್ ಬಿ ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಖಾದಿ ಆಧಾರಿತ ಉಡುಗೆ ಪರಿಚಯಿಸುವ ಪ್ರಸ್ತಾವ ಇನ್ನೂ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
“ಹಿಂದಿನ ಸಭೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಖಾದಿ ಡ್ರೆಸ್ ಕೋಡ್ ಪರಿಚಯಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು, ಆದರೆ, ಕುಲಪತಿಗಳು ಎಲ್ಲಾ ವಿಶ್ವವಿದ್ಯಾಲಯಗಳ ಚಾನ್ಸಲರ್ ಆಗಿರುವ ಕಾರಣ ಅಧಿಕೃತ ಆದೇಶ ಇನ್ನೂ ಹೊರ ಬಂದಿಲ್ಲ. ಹೀಗಾಗಿ ಈ ವರ್ಷ, ಕಳೆದ ವರ್ಷವಿದ್ದ ವಸ್ತ್ರಸಂಹಿತೆಯನ್ನೇ ಮಂದುವರೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಯುವತಿಯರು ಶ್ವೇತ ಬಟ್ಟೆ, ಸಾರಿ ಅಥವಾ ಚೂರಿದಾರ್ ಧರಿಸುವುದು, ಯುವಕರು ಕುರ್ತಾ, ಶರ್ಟ್ ಮತ್ತು ಟ್ರೌಸರ್ಸ್ ಧರಿಸಬೇಕು ಎಂದು ತಿಳಿಸಿದ್ದಾರೆ.
ಹಿಂದಿನ ತಿಂಗಳ ಉಪ ಕುಲಪತಿಗಳ ಸಭೆಯಲ್ಲಿ ಚರ್ಚೆಯ ನಂತರ ಸಮಿತಿ ನಿರ್ಮಿಸಿ ಶಿಫಾರಸು ಸಲ್ಲಿಸಲು ಸೂಚನೆ ನೀಡಲಾಗಿತ್ತು. ಮಹಿಳೆಯರಿಗೆ ಸಾರಿ, ಪುರುಷರಿಗೆ ಕುರ್ತಾ–ಪೈಜಾಮಾ ಪರಿಚಯಿಸುವ ಯೋಜನೆಗಳಿವೆ. ಆದರೆ, ಸಮಿತಿ ಇನ್ನೂ ವರದಿಯನ್ನು ಮಂಡಿಸಿಲ್ಲ.
ಇತ್ತೀಚೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗವು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಘಟಿಕೋತ್ಸವಗಳಲ್ಲಿ ಕೈಯಿಂದ ನೇಯ್ದ ಬಟ್ಟೆಗಳ (ಹ್ಯಾಂಡ್‌ವೋವನ್) ಉಪಯೋಗಿಸುವಂತೆ ನಿರ್ದೇಶನ ನೀಡಿತ್ತು.
ಮುಂದಿನ ವರ್ಷದಿಂದ ಬ್ರಿಟಿಷ್ ಶೈಲಿಯ ಗೌನಗಳು, ರೋಬ್ ಮತ್ತು ಕ್ಯಾಪ್‌ಗಳನ್ನು ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಉಡುಗೆ ಶೈಲಿಯಂತೆ ಬದಲಿಸಲಾಗುವುದು. ಕೆಲ ವಿಶ್ವವಿದ್ಯಾಲಯಗಳು ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ ಎಂದು ರಮೇಶ್ ಅವರು ತಿಳಿಸಿದ್ದಾರೆ.
ಕಳೆದ ವರ್ಷ, 32,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದಿದ್ದರು ಮತ್ತು 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು. ಈ ವರ್ಷವೂ ಅದೇ ರೀತಿಯ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿದೆ.
Advertisement