

ಮಂಗಳೂರು: ವಿಧ್ಯೆಗೆ ವಯಸ್ಸಿನ ಅಂತರವಿಲ್ಲ. ಕಲಿಯುವ ಆಸಕ್ತಿಯಿದ್ದರೆ ಯಾವ ವಯಸ್ಸಿನಲ್ಲಿಯೂ ಕಲಿಯಬಹುದು ಎಂಬುದಕ್ಕೆ ಮಂಗಳೂರಿನ ತಂದೆ- ಮಗ ಸಾಕ್ಷಿಯಾಗಿದ್ದಾರೆ. ಕೊಲ್ಯದ 57 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮಗ ಕ್ಷಿತಿಜ್ ರಾಜ್ ಅವರೊಂದಿಗೆ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ.52 ರಷ್ಟು ಅಂಕಗಳನ್ನು ಪಡೆದು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ಚಿಟ್ ಫಂಡ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿರುವ ಮೋಹನ್ ರಾಜ್ ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಥಮ ಪಿಯುಸಿ ಮುಗಿಸಿದ್ದರು. ಆದರೆ, ಹಣಕಾಸಿನ ತೊಂದರೆ ಮತ್ತು ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಅವರು ಆ ಸಮಯದಲ್ಲಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ತನ್ನ ಅಧ್ಯಯನವನ್ನು ಪೂರ್ಣಗೊಳಿಸದ ಪಶ್ಚಾತ್ತಾಪ ಅನೇಕ ವರ್ಷಗಳಿಂದ ಅವರನ್ನು ಕಾಡುತಿತ್ತು. ಅವರ ಮಗ ಪಿಯುಸಿ ಪರೀಕ್ಷೆಗೆ ತಯಾರಿ ಆರಂಭಿಸಿದಾಗ ತನ್ನ ದೀರ್ಘಾವಧಿಯ ಶೈಕ್ಷಣಿಕ ಗುರಿ ಸಾಧಿಸಲು ಮತ್ತೊಂದು ಅವಕಾಶ ಪಡೆಯಲು ನಿರ್ಧರಿಸಿದರು.ಒಟ್ಟಿಗೆ ಓದುವುದರಿಂದ ಮಗನಿಗೆ ಪ್ರೋತ್ಸಾಹ ಮತ್ತು ಬೆಂಬಲ ಸಿಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.
ಮಗನು ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ನೋಡಿ ನನಗೆ ಸ್ಫೂರ್ತಿಯಾಯಿತು. ನನಗಾಗಿ ಮಾತ್ರವಲ್ಲದೆ ಆತನನ್ನು ಪ್ರೇರೇಪಿಸಲು ದ್ವಿತೀಯ ಪಿಯುಸಿಗೆ ಹಾಜರಾಗಲು ನಿರ್ಧರಿಸಿದೆ ಎಂದು ಮೋಹನ್ ಹೇಳಿದರು. ಕೆಲಸ ಮತ್ತು ಅಧ್ಯಯನವನ್ನು ನಿಭಾಯಿಸುತ್ತಾ, ಮೋಹನ್ ತೊಕ್ಕೊಟ್ಟುವಿನ ಮಠದಲ್ಲಿ ಟ್ಯುಟೋರಿಯಲ್ ಮತ್ತು ಕಂಪ್ಯೂಟರ್ ಸೆಂಟರ್‌ಗೆ ಸೇರಿಕೊಂಡರು.
ಅಲ್ಲಿ ಅವರು ಪ್ರತಿದಿನ ಬೆಳಿಗ್ಗೆ 8 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4 ರವರೆಗೆ ತರಗತಿಗಳಿಗೆ ಹಾಜರಾಗಿದ್ದರು. ಅವರ ಮಕ್ಕಳಾದ ಪೃಥ್ವಿ, ಪ್ರಕೃತಿ ಮತ್ತು ಕ್ಷಿತಿಜ್ ರಾಜ್ ತಂದೆಗೆ ನೆರವಾಗಿದ್ದಾರೆ.
40 ವರ್ಷಗಳ ನಂತರ ಶಿಕ್ಷಣಕ್ಕೆ ಮರಳುವುದು ಸುಲಭವಲ್ಲ ಎಂಬುದನ್ನು ಒಪ್ಪಿಕೊಂಡ ಮೋಹನ್ ರಾಜ್, ಬರವಣಿಗೆ ಮತ್ತು ಅಧ್ಯಯನದ ಸಂಪರ್ಕ ಕಳೆದುಕೊಂದ್ದೆ. ಹೀಗಾಗಿ ಸಮಯಕ್ಕೆ ಪೇಪರ್‌ಗಳನ್ನು ಪೂರ್ಣಗೊಳಿಸುವುದು ಸವಾಲಾಗಿತ್ತು" ಎಂದು ಅವರು ಹೇಳಿದರು.
ಕಲಾ ವಿಭಾಗದಲ್ಲಿ ಶೇ.52ರಷ್ಟು ಅಂಕ ಗಳಿಸಿ ಮೊದಲ ಪ್ರಯತ್ನದಲ್ಲೇ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದ ಮೋಹನ್ ರಾಜ್ ಅವರ ಶ್ರಮಕ್ಕೆ ತಕ್ಕ ಫಲ ದೊರೆಯಿತು. ಈ ಮಧ್ಯೆ ಅವರ ಮಗ ವಾಣಿಜ್ಯ ವಿಭಾಗದಲ್ಲಿ ಶೇ. 67 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಮೋಹನ್ ಈಗ ಪತ್ರವ್ಯವಹಾರದ ಮೂಲಕ ಕಾನೂನು ಅಧ್ಯಯನ ಮಾಡುವ ತನ್ನ ಬಹುಕಾಲದ ಕನಸನ್ನು ಮುಂದುವರಿಸಲು ಬಯಸಿದ್ದಾರೆ.
Advertisement