

ಬೆಂಗಳೂರು: ರಾಜ್ಯದ 5,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡಿವೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಾದ್ಯಂತ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರು ಕಲುಷಿತವಾಗಿದೆ ಎನ್ನುವ ಭಯಾನಕ ವರದಿ ಬೆಳಕಿಗೆ ಬಂದಿದೆ. ಇದು ಕೇವಲ ಅಂಕಿ-ಅಂಶಗಳ ವಿಷಯವಲ್ಲ. ಲಕ್ಷಾಂತರ ಜನರ ಆರೋಗ್ಯ, ಸುರಕ್ಷತೆ ಮತ್ತು ಜೀವದ ಪ್ರಶ್ನೆ ಎಂದು ಹೇಳಿದ್ದಾರೆ.
ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಮೊದಲ ಜವಾಬ್ದಾರಿ. ಆದರೆ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಫ್ಲೋರೈಡ್, ನೈಟ್ರೇಟ್, ಲವಣಾಂಶ ಹೆಚ್ಚಿದ ನೀರಿನಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳು, ಗರ್ಭಿಣಿಯರು, ವೃದ್ಧರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರ ಹೊಣೆ ಯಾರು ಹೊರುತ್ತಾರೆ? ಎಂದು ಪ್ರಶ್ನಿಸಿ, ಕಿಡಿಕಾರಿದ್ದಾರೆ.
“ಗ್ಯಾರಂಟಿ” ಯೋಜನೆಗಳನ್ನು ಕೊಟ್ಟಿರುವುದೇ ಮಹಾನ್ ಸಾಧನೆ ಎಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ, ಜನರ ಮೂಲಭೂತ ಅಗತ್ಯಗಳ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ನಿರ್ಲಜ್ಜತನ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಬೆಂಗಳೂರು ನಗರದ ಕಸದ ಸಮಸ್ಯೆ ಕುರಿತಂತೆಯೂ ಸರ್ಕಾರದ ವಿರುದ್ಧ ಅಶೋಕ್ ಅವರು ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ರಾಶಿ ಬಿದ್ದಿದೆ. ಸಿಲಿಕಾನ್ ಸಿಟಿ ಗಬ್ಬೆದ್ದು ನಾರುತ್ತಿದೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಬಿಟ್ಟು ಇವ್ಯಾವುದೂ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಐಟಿ ರಾಜಧಾನಿ, ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ನಮ್ಮ ಬೆಂಗಳೂರು ಇಂದು ಕಸದ ಗುಡ್ಡವಾಗಿ ಮಾರ್ಪಟ್ಟಿದೆ. ಜಿಬಿಎ ಮುಖ್ಯ ಕಚೇರಿಯಿಂದ ಕೂಗಳತೆ ದೂರದಲ್ಲರುವ ರಸ್ತೆಯಲ್ಲೇ 30 ದಿನಕ್ಕೊಮ್ಮೆ ಕಸ ವಿಲೇವಾರಿ ಎನ್ನುವ ಸ್ಥಿತಿ ಬಂದಿರುವುದು, ಬೆಂಗಳೂರಿನ ಆಡಳಿತ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಡಿಕೆ.ಶಿವಕುಮಾರ್ ಅವರೇ, ಇದೇನಾ ನಿಮ್ಮ “ಬ್ರ್ಯಾಂಡ್ ಬೆಂಗಳೂರು”? ನಿಮ್ಮ ಭರವಸೆಗಳು, ಯೋಜನೆಗಳು ಎಲ್ಲಿಗೆ ಹೋಯಿತು? GBA ಸಂಪೂರ್ಣವಾಗಿ ನಿಷ್ಕ್ರಿಯವಾಗಿ ಆಡಳಿತ ಅಸ್ತವ್ಯಸ್ತವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಕಸದ ರಾಶಿಗಳು ಕೇವಲ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿಲ್ಲ. ನೀವು ಬಿಟ್ಟಿರುವ ಕಸದ ರಾಶಿಯ ಸಾಕ್ಷಿ ಗುಡ್ಡೆಗಳು, ಬಿರು ಬೇಸಿಗೆಯಲ್ಲಿ ರೋಗಗಳ ಆವಾಸ ಸ್ಥಳವಾಗುವ ಅಪಾಯ ಎದುರಾಗಿದೆ. ಡೆಂಗ್ಯೂ, ವೈರಲ್ ಸೋಂಕುಗಳ ಭೀತಿ ನಡುವೆ ನಾಗರಿಕರು ಬದುಕಬೇಕಾದ ಪರಿಸ್ಥಿತಿ ಬಂದಿದೆ. ಜನರ ಆರೋಗ್ಯ, ಸ್ವಚ್ಛತೆ ಬಗ್ಗೆ ನಿಮ್ಮ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲವೇ?
ಕುರ್ಚಿ ಕಚ್ಚಾಟ ಬಿಡಿ, ಮೊದಲು ನಗರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ. ಜಾಹೀರಾತುಗಳಿಂದ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರಿನ ಜನತೆ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಸಿದ್ದಾರೆ.
Advertisement