

ಬೆಂಗಳೂರು: ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳ ಕುರಿತ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಕ್ಕಿದ್ದು, ಹೈಕೋರ್ಟ್ ನೀಡಿದ ಅನುಮತಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಯೊಂದಿಗೆ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಆದೇಶ ನೀಡಿದ್ದ ಹೈಕೋರ್ಟ್, ಬೈಕ್ ಟ್ಯಾಕ್ಸಿ ಸೇವೆಗಳಿಗೆ ರಾಜ್ಯದಲ್ಲಿ ಸ್ಪಷ್ಟ ನಿಯಮಾವಳಿ ಇಲ್ಲ ಎಂಬ ಕಾರಣಕ್ಕೆ ಹೇರಲಾಗಿದ್ದ ನಿಷೇಧವನ್ನು ರದ್ದುಪಡಿಸಿತ್ತು. ಇದರಿಂದ ಸೇವೆಗಳು ಪುನರಾರಂಭವಾಗಿದ್ದವು.
2025ರ ಜೂನ್‌ನಲ್ಲಿ ನ್ಯಾಯಾಲಯದ ಸೂಚನೆಗಳ ಮೇರೆಗೆ ಈ ಸೇವೆಗಳು ಸ್ಥಗಿತಗೊಂಡಿದ್ದವು. ಇತ್ತೀಚಿನ ಆದೇಶದಿಂದ ತಾತ್ಕಾಲಿಕವಾಗಿ ಕಾನೂನು ಅಡ್ಡಿ ನಿವಾರಣೆಯಾಗಿದ್ದರೂ, ಇದೀಗ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗುವ ನಿರ್ಧಾರದಿಂದ ಸಮಸ್ಯೆ ಇನ್ನೂ ಅಂತಿಮವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಆದಿ ನಾರಾಯಣ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಕಾನೂನುಬದ್ಧವಾಗಿದೆ. ಎಲ್ಲರಿಗೂ ಒಂದೇ ರೀತಿಯ ಕಾನೂನು ಇರಬೇಕು” ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಆರು ಲಕ್ಷ ಕುಟುಂಬಗಳು ಈ ಸೇವೆಗಳ ಮೇಲೆ ಜೀವನ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಮಹಾಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ಸರ್ಕಾರ ಮೊದಲಿಗೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನೀಡಿದ್ದ 90 ದಿನಗಳ ಗಡುವನ್ನು ತಪ್ಪಿಸಿಕೊಂಡಿತ್ತು. ಆದರೆ, ಇದೀಗ ಆಂತರಿಕ ಚರ್ಚೆಗಳ ಬಳಿಕ ಸುಪ್ರೀಂ ಕೋರ್ಟ್‌ಗೆ ಹೋಗುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
Advertisement