

ಕೊಪ್ಪಳ: ರಾಜ್ಯದಲ್ಲಿ ಬಿಸಿಲ ಬೇಗೆಯೊಂದಿಗೆ ಕುಡಿಯುವ ನೀರಿನ ಭೀಕರ ಬಿಕ್ಕಟ್ಟು ಎದುರಾಗಿದ್ದು, ಹಲವು ಜಿಲ್ಲೆಗಳಲ್ಲಿ ನೀರಿಗಾಗಿ ತೀವ್ರ ಹಾಹಾಕಾರ ಶುರುವಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರಿಗೆ ಒಂದೆಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರು ಸಿಗುತ್ತಿಲ್ಲ. ಇದರಿಂದ ಜನ ಕಂಗಾಲಾಗಿದ್ದಾರೆ.
ಕೊಪ್ಪಳದಲ್ಲೂ ನೀರಿನ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಬುಧವಾರ ಕೈಯಲ್ಲಿ ಖಾಲಿ ಕೊಡ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಮಹಿಳೆಯರು ಖಾಲಿ ಕೊಡದೊಂದಿಗೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ತೆರಳುತ್ತಿದ್ದ ಸಚಿವ ಶಿವರಾಜ್ ತಂಗಡಗಿ ಅವರ ಕಾರಿಗೆ ದಿಢೀರ್ ಮುತ್ತಿಗೆ ಹಾಕಿದ್ದಾರೆ. ಇದರಿಂದ ತಬ್ಬಿಬ್ಬು ಆದ ಸಚಿವರು, ಮಹಿಳೆಯರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟಿದ್ದಾರೆ.
Advertisement