ನವೋದ್ಯಮ, ನಾವೀನ್ಯತೆ ಬಲವರ್ಧನೆ: ಐಡಿಯಾಬಾಜ್ ಟೆಕ್ ಜೊತೆಗಿನ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ!

ರಾಜ್ಯದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಪೂರಕವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಉದ್ಯಮ ಮತ್ತು ಶೈಕ್ಷಣಿಕ ವಲಯದ ತಜ್ಞರ ಮಧ್ಯೆ ಸಮನ್ವಯ ಸಾಧಿಸುವುದಕ್ಕೆ ಈ ಒಪ್ಪಂದ ಒತ್ತು ನೀಡಲಿದೆ.
priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್-ಕಿಟ್ಸ್) ಮೂಲಕ, ರಾಜ್ಯದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ಐಡಿಯಾಬಾಜ್ ಟೆಕ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ರಾಜ್ಯ ಸರ್ಕಾರದ ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕ ಹಾಗೂ ಕರ್ನಾಟಕ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ, ಐಡಿಯಾಬಾಜ್ ಸಂಸ್ಥೆಯ ಸಹ ಸಂಸ್ಥಾಪಕ ಮುದಿತ್ ಕುಮಾರ್ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಪೂರಕವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಉದ್ಯಮ ಮತ್ತು ಶೈಕ್ಷಣಿಕ ವಲಯದ ತಜ್ಞರ ಮಧ್ಯೆ ಸಮನ್ವಯ ಸಾಧಿಸುವುದಕ್ಕೆ ಈ ಒಪ್ಪಂದ ಒತ್ತು ನೀಡಲಿದೆ.

ದೇಶದಲ್ಲಿ ರಾಜ್ಯವು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮುವ ದಿಸೆಯಲ್ಲಿ ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮತ್ತು ಮಾರುಕಟ್ಟೆಯ ಪೈಪೋಟಿ ಎದುರಿಸಲು ಬೇಕಾದ ಕ್ರಮಗಳನ್ನು ರೂಪಿಸುವುದು ಒಪ್ಪಂದದ ಉದ್ದೇಶವಾಗಿದೆ.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಎರಡು ಮತ್ತು ಮೂರನೇ ಹಂತದ ನಗರಗಳತ್ತ ನವೋದ್ಯಮಗಳು ಸ್ಥಾಪನೆಯಾಗಿ ಅಲ್ಲಿಯೂ ಯುವಕರಿಗೆ ಉದ್ಯೋಗಗಳು ಸೃಷ್ಟಿಯಾಗುವ ದಿಸೆಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು. ರಾಜ್ಯದ ಉದ್ದಗಲಕ್ಕೂ ಹೊಸ ಹೊಸ ಹೂಡಿಕೆದಾರರು ಮತ್ತು ನವೋದ್ಯಮ ಸ್ಥಾಪಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಮುಂತಾದ ವಿಷಯಗಳು ಒಪ್ಪಂದದಲ್ಲಿ ಸೇರಿವೆ.

ಈ ಒಪ್ಪಂದದ ಮೂಲಕ ಕಿಟ್ಸ್ ಮತ್ತು ಐಡಿಯಾಬಾಜ್ ಸಂಸ್ಥೆಗಳ ಮಧ್ಯೆ ಇರುವ ಸಹಾಯ ಸಹಕಾರವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವುದು, ಪ್ರಮುಖ ಕ್ಷೇತ್ರಗಳಲ್ಲಿ ಮಾರುಕಟ್ಟೆಗೆ ಸನ್ನದ್ಧ ಯೋಜನೆಗಳನ್ನು ರೂಪಿಸುವುದು, ಎಲಿವೇಟ್ ಬೆಂಗಳೂರು, ಬಿಯಾಂಡ್ ಬೆಂಗಳೂರು, ಇನ್ನೋವರ್ಸ್ ಮೊದಲಾದ ಕಾರ್ಯಕ್ರಮಗಳ ಮೂಲಕ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡುವುದು ಪ್ರಮುಖ ಉದ್ದೇಶಗಳಾಗಿವೆ.

ಒಪ್ಪಂದದ ಉದ್ದೇಶಗಳು: ಈ ಸಹಯೋಗವು ಕಿಟ್ಸ್ ಮತ್ತು ಐಡಿಯಾಬಾಜ್ ಟೆಕ್ ಪ್ರೈವೇಟ್ ಲಿಮಿಟೆಡ್‌ನ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಯತ್ನಿಸುವ ಮೂಲಕ ರಚನಾತ್ಮಕ ಮತ್ತು ಸಾಧಿಸಬಹುದಾದ ಕಾರ್ಯಕ್ರಮಗಳ ಮೂಲಕ ಸ್ಟಾರ್ಟ್ ಅಪ್‌ಗಳನ್ನು ಬೆಂಬಲಿಸಲಿದೆ. ಜತೆಗೆ ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಒತ್ತು ಕೊಡುವುದು ಹಾಗೂ ವಲಯಗಳಾದ್ಯಂತ ಸಾಮರ್ಥ್ಯ ವೃದ್ಧಿ, ಮಾರ್ಗದರ್ಶನ ಮತ್ತು ನಾವೀನ್ಯತೆ-ಚಾಲಿತ ಉಪಕ್ರಮಗಳನ್ನು ಸಕ್ರಿಯಗೊಳಿಸುವುದರ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿದೆ.

priyank Kharge
ರಾಜ್ಯ ಸಚಿವ ಸಂಪುಟ ಸಭೆ: 518.27 ಕೋಟಿ ರೂ ವೆಚ್ಚದ 'ಕರ್ನಾಟಕ ನವೋದ್ಯಮ ನೀತಿ 2025 -2030'ಕ್ಕೆ ಅನುಮೋದನೆ!

ಈ ವಿನೂತನ ಹೆಜ್ಜೆಯ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಈ ಒಪ್ಪಂದವು ಮಹತ್ವದ ಹೆಜ್ಜೆಯಾಗಿದೆ. ಸರ್ಕಾರ ಮತ್ತು ಐಡಿಯಾಬಾಜ್‌ನಂತಹ ಮಹತ್ವದ ಪ್ರವರ್ಧಮಾನ ವೇದಿಕೆಗಳ ನಡುವೆ ಬಲವಾದ ಪಾಲುದಾರಿಕೆಯನ್ನು ಬೆಳೆಸುವ ಮೂಲಕ, ನಾವು ಸರಿಯಾದ ಬೆಂಬಲ ವ್ಯವಸ್ಥೆಗಳು, ಮಾರ್ಗದರ್ಶನ ಮತ್ತು ಯಶಸ್ವಿಯಾಗಲು ಅಗತ್ಯವಾದ ಮಾರುಕಟ್ಟೆ ಪ್ರವೇಶದೊಂದಿಗೆ ನವೋದ್ಯಮಗಳಿಗೆ ಅಗತ್ಯ ಉತ್ತೇಜನ ನೀಡುತ್ತಿದ್ದೇವೆ ಎಂದರು.

ಐಡಿಯಾಬಾಜ್ ಸಂಸ್ಥೆಯ ಸಹ- ಸಂಸ್ಥಾಪಕ ಮುದಿತ್ ಕುಮಾರ್ ಮಾತನಾಡಿ ಈ ಸಹಕಾರವು ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸುವಿಕೆಗೆ ಗಮನ ಕೇಂದ್ರೀಕರಿಸಲಿದೆ. ಬೆಂಗಳೂರು ಆಚೆಗಿನ ಪ್ರದೇಶಗಳಲ್ಲಿ, ನವೋದ್ಯಮಗಳು ಮಾರುಕಟ್ಟೆಯ ನೈಜ ಬೇಡಿಕೆ ಆಧರಿಸಿ ಬೆಳೆಯಲು ನೆರವು ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com