ಮಾನವೀಯತೆ ಮರೆತು ರಕ್ಕಸ ವರ್ತನೆ: ಚೀಲದಲ್ಲಿ ಕಟ್ಟಿ ಶ್ವಾನಗಳ ಎಸೆದ ನೆರೆಮನೆಯವರು, ಮಾಲೀಕನಿಂದ ಹತಾಶ ಹುಡುಕಾಟ..!

53 ವರ್ಷದ ಸುಧೀರ್ ರಾವ್, ತನ್ನ ಎರಡು ಸಾಕು ನಾಯಿಗಳಾದ ಟಾಮಿ ಮತ್ತು ಅದರ ಪುಟ್ಟ ಮರಿಯನ್ನು ಹುಡುಕುತ್ತಾ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಶ್ವಾನ ಸುಧೀರ್ ಅವರಿಗೆ ಸಾಕು ಪ್ರಾಣಿಗಳಷ್ಟೇ ಅಲ್ಲ, ಕುಟುಂಬದ ಸದಸ್ಯರು, ಮನೆಯ ಉಸಿರಾಗಿದ್ದವು.
Mangaluru man searches for missing pet dogs
ನಾಯಿಗಳಿಗಾಗಿ ಮಾಲೀಕನ ಹುಡುಕಾಟ
Updated on

ಮಂಗಳೂರು: ಜನರಲ್ಲಿ ಮಾನವೀಯತೆ ಮರೆಯಾಗುತ್ತಿರುವುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮಾತು ಬಾರದ ಎರಡು ಶ್ವಾನಗಳನ್ನು ಚೀಲದಲ್ಲಿ ಕಟ್ಟಿ, ನೆರೆಮನೆಯವರು ದೂರದ ಕಸದ ಗುಡ್ಡದಲ್ಲಿ ಬಿಸಾಡಿದ್ದಾರೆ. ಇದೀಗ ತನ್ನ ಸಾಕು ನಾಯಿಗಳಿಗಾಗಿ ಮಾಲೀಕ ಪ್ರತೀನಿತ್ಯ ಕಣ್ಣೀರಿಡುತ್ತಾ ಹುಡುಕಾಟ ನಡೆಸುತ್ತಿದ್ದಾರೆ.

53 ವರ್ಷದ ಸುಧೀರ್ ರಾವ್, ತನ್ನ ಎರಡು ಸಾಕು ನಾಯಿಗಳಾದ ಟಾಮಿ ಮತ್ತು ಅದರ ಪುಟ್ಟ ಮರಿಯನ್ನು ಹುಡುಕುತ್ತಾ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಶ್ವಾನ ಸುಧೀರ್ ಅವರಿಗೆ ಸಾಕು ಪ್ರಾಣಿಗಳಷ್ಟೇ ಅಲ್ಲ, ಕುಟುಂಬದ ಸದಸ್ಯರು, ಮನೆಯ ಉಸಿರಾಗಿದ್ದವು.

ಏಪ್ರಿಲ್ 23ರಂದು ಬೆಳಿಗ್ಗೆ ಎಲ್ಲವೂ ಸಹಜವಾಗಿತ್ತು. ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ಸುಧೀರ್ ರಾವ್, ಮನೆ ಬಾಗಿಲು ತೆರೆದಾಗ ಗಾಬರಿಗೊಂಡಿದ್ದಾರೆ. ದಿನವೂ ಓಡಿ ಬಂದು ಸ್ವಾಗತಿಸುವ ಟಾಮಿ ಕಾಣಿಸಿಲ್ಲ. ಅದರ ಪುಟ್ಟ ಮರಿ ಕೂಡ ನಾಪತ್ತೆಯಾಗಿದೆ. ಇದರಿಂದ ಆತಂಕಗೊಂಡು ಸುತ್ತಮುತ್ತಲಿನ ಬೀದಿಗಳು ಸೇರಿ ಎಲ್ಲೆಲ್ಲೂ ಹುಡುಕಿದರೂ ಯಾವುದೇ ಸುಳಿವು ಸಿಕಿಲ್ಲ.

ಬಳಿಕ ಅನುಮಾನ ನೆರೆಮನೆಯವರತ್ತ ತಿರುಗಿದೆ. ನಂತರ ಪ್ರಶ್ನೆ ಮಾಡಿದಾಗ ಆರಂಭದಲ್ಲಿ ನಿರಾಕರಿಸಿದ್ದಾರೆ. ನಂತರ ದೇವರ ಮೇಲೆ ಪ್ರಮಾಣ ಮಾಡಬೇಕೆಂದು ಒತ್ತಾಯಿಸಿದ ಬಳಿಕ ಸತ್ಯ ಒಪ್ಪಿಕೊಂಡಿದ್ದಾರೆ.

ನಾಯಿಗಳ ಕಾಲು ಮತ್ತು ಬಾಯಿಗಳನ್ನು ಕಟ್ಟಿ, ಚೀಲಗಳಲ್ಲಿ ಇರಿಸಿ, ಬಿ.ಸಿ. ರಸ್ತೆಯ 30 ಕಿ.ಮೀ ದೂರದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿ ಬಂದಿರುವುದಾಗಿ ಹೇಳಿದ್ದಾರೆ.

ಬಳಿಕ ಸುಧೀರ್ ಅವರಿಗೆ ಪ್ರಪಂಚವೇ ಕುಸಿದು ಬಿದ್ದ ಅನುಭವವಾಗಿದ್ದು, ಕೂಡಲೇ ನಾಯಿಗಳ ಬಿಸಾಡಿದ್ದ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Mangaluru man searches for missing pet dogs
Video: ಎಳನೀರು ವ್ಯಾಪಾರಿಯಿಂದ ಬೀದಿ ನಾಯಿ ಮೇಲೆ ಮಚ್ಚಿನಿಂದ ಹಲ್ಲೆ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಂತರ ಸುಧೀರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಸುಧೀರ್ ಅವರ ನೆರೆಹೊರೆಯವರನ್ನು ಕರೆಸಿ, ನಾಯಿಗಳನ್ನು ಬಿಟ್ಟ ನಿಖರವಾದ ಸ್ಥಳವನ್ನು ತೋರಿಸಲು ಸೂಚಿಸಿದ್ದಾರೆ. ಆದರೂ ಶ್ವಾನಗಳು ಪತ್ತೆಯಾಗಿಲ್ಲ.

ತಮ್ಮ ಪ್ರಯತ್ನವನ್ನು ಬಿಡದ ಸುಧೀರ್ ಅವರು ಆ ದಿನದಿಂದ ಇಂದಿನವರೆಗೂ ಪ್ರತಿದಿನವೂ ಸ್ಥಳಕ್ಕೆ ತೆರಳಿ. ತಮ್ಮ ಸ್ಕೂಟರ್ ಹಾರ್ನ್ ಮಾಡಿ, ನಾಯಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಇದು ಕೇವಲ ಒಂದು ಹುಡುಕಾಟವಲ್ಲ ಪ್ರೀತಿಯ ಹೋರಾಟ. ಮಾತಿಲ್ಲದ ಜೀವಿಗಳ ಜೊತೆ ಬೆಸೆದುಕೊಂಡ ಬಾಂಧವ್ಯ ಎಷ್ಟು ಗಾಢವಾಗಿರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಮಾನವೀಯತೆ ಮರೆತು ನಡೆದ ಕ್ರೂರ ಕೃತ್ಯ ಒಂದು ಕಡೆ ಇದ್ದರೂ, ಮತ್ತೊಂದು ಕಡೆ ಒಬ್ಬ ವ್ಯಕ್ತಿಯ ಹೃದಯದಲ್ಲಿ ಇನ್ನೂ ಜೀವಂತವಾಗಿರುವ ಪ್ರೀತಿ, ಕರುಣೆ, ನಂಬಿಕೆ—ಇವೆಲ್ಲವೂ ಈ ಘಟನೆ ಮನಮುಟ್ಟುವಂತೆ ಮಾಡುತ್ತಿದೆ.

ಇಂದು ಸುಧೀರ್ ರಾವ್ ಅವರ ಕಣ್ಣುಗಳಲ್ಲಿ ನಿರಾಶೆ ಇದ್ದರೂ, ತಮ್ಮ ನಾಯಿಗಳು ಬಂದೇ ಬರುವುದು ಎಂಬ ವಿಶ್ವಾಸ ಜೀವಂತವಾಗಿದೆ. “ಒಂದು ದಿನ ನನ್ನ ಟಾಮಿ ಮರಳಿ ಬರುತ್ತಾಳೆ” ಎಂಬ ನಂಬಿಕೆ ನನಗಿದೆ.ಈ ಹುಡುಕಾಟ ಮುಂದುವರಿಯುತ್ತದೆ ಎಂದು ಸುಧೀರ್ ಹೇಳಿದ್ದಾರೆ.

ಸುಧೀರ್ ಅವರ ಈ ಹುಡುಕಾಟದ ಪ್ರಯತ್ನದಲ್ಲಿ ಪುತ್ತೂರಿನ ಪ್ರಾಣಿ ಕಾರ್ಯಕರ್ತೆ ಮಮತಾ ರಾವ್ ಕೂಡ ಕೈಜೋಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಂಡು,. ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com